ಸರಗೂರು ಸಮೀಪದ ನಿಲುವಾಗಿಲು ಮತ್ತು ತುಂಬಸೋಗೆ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. 
ಮೈಸೂರು

ಮಹದೇಶ್ವರಸ್ವಾಮಿ ದನಗಳ ಜಾತ್ರಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ವಿಜೃಂಭಣೆಯಿಂದ ಜರುಗಿದ ರಥೋತ್ಸವ
ಸರಗೂರು : ಸಮೀಪದ ನಿಲುವಾಗಿಲು ಮತ್ತು ತುಂಬಸೋಗೆ ಮಹದೇಶ್ವರಸ್ವಾಮಿ ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಹರಕೆ ಹೊತ್ತ ಸಾವಿರಾರು ಭಕ್ತರು ಕೊಂಡೋತ್ಸವದಲ್ಲಿ ಭಾಗವಹಿಸಿ  ಹರಕೆ ತೀರಿಸಿ ಮಹದೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಸೋಮವಾರ ಬೆಳಗಿನ ಜಾವ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬಿಡುಗಲು ಪಡವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಸಾನ್ನಿದ್ಯದಲ್ಲಿ ವಿವಿಧ ಹೋಮ ಹಾಗೂ ಸ್ವಾಮಿಗೆ ರುದ್ರಾಭಿಷೇಕ ನಡೆಸಲಾಯಿತು. 
ಹುಲಿವಾಹನ, ಬಸವ ವಾಹನ, ಉತ್ಸವ ಮೂರ್ತಿಯನ್ನು ನಿಲುವಾಗಿಲು ಮತ್ತು ತುಂಬಸೋಗೆ ಗ್ರಾಮಗಳಿಂದ ತಂದು ಮೆರವಣಿಗೆ ನಡೆಸಿದ ಬಳಿಕ ಜಾತ್ರಾಮಾಳದಲ್ಲಿ ಇರಿಸಲಾಯಿತು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಸ್ವಾಮಿ ಅವರಿಗೆ ಹಾಲು ಹರವಿ ಸೇವೆ ಹಾಗೂ ನಂತರ ಕೊಂಡೋತ್ಸವ ನಡೆಯಿತು. ಬಂದಂತಹ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಶಾಸಕ ಅನೀಲ್ ಚಿಕ್ಕಮಾದು ಅವರ ತಾಯಿ ನಾಗಮ್ಮ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಮಹದೇಶ್ವರಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷ ಬಿ.ನಂಜಪ್ಪ, ಕಾರ್ಯದರ್ಶಿ ಪ್ರಕಾಶ್, ಸಮಿತಿ ಮುಖಂಡರಾದ ಬಿ.ಸಿ.ಬಸಪ್ಪ, ನಂಜುಡಸ್ವಾಮಿ, ರಾಜಣ್ಣ, ಗೋಪಾಲಯ್ಯ, ಅಂಕನಾಯಕ, ಯಜಮಾನರಾದ ಬಿ.ಎಸ್. ಚನ್ನನಾಯಕ, ನಾಗರಾಜು, ಶಿವಣ್ಣ, ವೆಂಕಟ್ಟಪ್ಪ, ವೆಂಕಟಾಚಲ, ಮಂಜು, ಸುರೇಶ್, ನಾಗಣ್ಣ, ಸೋಮಯ್ಯ, ಅನ್ನದಾನ ಸಮಿತಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಣ್ಣಗೌಡ, ನಿಲುವಾಗಿಲು ಮತ್ತು ತುಂಬಸೋಗೆ ಸೇರಿದಂತೆ ಅಕ್ಕ ಪಕ್ಕದ  ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಥೋತ್ಸವ: ಬುಧವಾರ ಬೆಳಗ್ಗೆ ಮಹದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ 10 ಗಂಟಗೆ ರಾಜಣ್ಣ ಮತ್ತು ಜೈಕುಮಾರ್ ತಂಡದವರಿಂದ ರಸಮಂಜರಿ ನಡೆಯಿತು. ರಾತ್ರಿ ಮಹದೇಶ್ವರ ಸ್ವಾಮಿ ಅವರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಯಿತು.