ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಂ.ಜಿ.ಆರ್.ಅರಸ್, ಡಾ.ಎಚ್.ಎನ್.ಲೋಕೇಶಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಲೀಲಾಪ್ರಕಾಶ್, ತೋಂಟದಾರ್ಯ, ಡಾ.ರತ್ನಾ ಹಾಲಪ್ಪಗೌಡ ಇನ್ನಿತರರಿದ್ದರು 
ಮೈಸೂರು

ಸ್ತ್ರೀ ಪಾಲಿನ ಮಹಾಚೇತನ ಬಸವಣ್ಣ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 110ನೇ ಜಯಂತಿ
  • ಬಸವಶ್ರೀ ಪ್ರಶಸ್ತಿ
  • ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಸ್ಥಾನಮಾನ
  • ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮೂಲಕ ಬಸವಣ್ಣನವರ ಸಮಾಜ ಪರಿವರ್ತನೆ
ಮೈಸೂರು: ಮಹಿಳೆಯರಿಗೆ ಸಮಾನತೆ ನೀಡುವ ಮೂಲಕ ದೊಡ್ಡ ಕ್ರಾಂತಿ ಮಾಡಿದವರು ಬಸವಣ್ಣನವರು. ಇವರು ಸ್ತ್ರೀಯ ಪಾಲಿನ ಮಹಾಚೇತನ ಎಂದು ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಿ ಡಾ.ಲೀಲಾಪ್ರಕಾಶ್ ಹೇಳಿದರು.
ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಸಂಕೀರ್ಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 110ನೇ ಜಯಂತಿ, ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ಪೂರ್ವದಲ್ಲಿ ಮಹಿಳೆಯರ ಸ್ಥಿತಿಗತಿ ಶೋಚನೀಯವಾಗಿತ್ತು. ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯದಿಂದಲೂ ವಂಚಿತರಾಗಿದ್ದರು. ಅವರನ್ನು ಹೀನಭಾವನೆಯಿಂದ ನೋಡಲಾಗುತ್ತಿತ್ತು. ಇದನ್ನು ಬಲವಾಗಿ ವಿರೋಧಿಸಿದ ಬಸವಣ್ಣನವರು ಸ್ತ್ರಿಯರಿಗೆ ಪುರುಷರಷ್ಟೇ ಸಮಾನತೆ ನೀಡಿ, ಸಂಕೋಲೆಗಳಿಂದ ಬಿಡುಗಡೆಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದರು ಎಂದರು.
ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಮೂಲಕ ಬಸವಣ್ಣನವರ ಸಮಾಜ ಪರಿವರ್ತನೆ ಮಾಡಿದರು. ಸಂಪೂರ್ಣ ಸ್ಥಾನಮಾನ ನೀಡುವ ಮೂಲಕ ಸ್ತ್ರೀಕುಲ ಅಭ್ಯುದಯಕ್ಕೆ ನಾಂದಿ ಹಾಡಿದರು. ಇದರ ಫಲವಾಗಿ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಸ್ಥಾನಮಾನ, ಗೌರವ ಪಡೆದುಕೊಂಡು ಉತ್ತಮವಾಗಿ ವಚನೆ ರಚನೆಗೆ ಸಾಧ್ಯವಾಯಿತು. ಅಂತೆಯೆ ಅನೇಕ ಶರಣೆಯರು ವಚನ ಸಾಹಿತ್ಯದಲ್ಲಿ ತೊಡಗಿದ್ದರು ಎಂದರು.
ನಾನು ಒಬ್ಬನ್ನೇ ಬೆಳೆಯಬಾರದು. ನನ್ನ ಸುತ್ತಲಿನ ಜನರನ್ನೂ ಬೆಳೆಸಬೇಕು. ಅವರನ್ನು ಜತೆಗೆ ಕರೆದೊಯ್ಯಬೇಕು. ಇದುವೇ ಬಸವಣ್ಣನವರ ನಿಲುವಾಗಿತ್ತು. ಹೀಗಾಗಿ, ಅನೇಕ ವಚನಕಾರರು ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಚುಟುಕು ಸಾಹಿತಿ ಡಾ.ಎಂ.ಜಿ.ಆರ್.ಅರಸ್, ಗಾನಯೋಗಿ ಕಲಾಟ್ರಸ್ಟಿನ ಅಧ್ಯಕ್ಷ ಡಾ.ಎಚ್.ಎನ್.ಲೋಕೇಶಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಎಂಎಲ್‌ಸಿ ತೋಂಟದಾರ್ಯ, ಸಂಘಟನೆಯ ಅಧ್ಯಕ್ಷೆ ಡಾ.ರತ್ನ ಹಾಲಪ್ಪಗೌಡ ಇನ್ನಿತರರಿದ್ದರು