ನಗರದ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಕೃಷ್ಣ ತಿಪ್ಪೂರು ಅವರ ‘ಅಮೃತ ರಾಮಾಯಣ’ ಎರಡು ಸಂಪುಟಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ತ್ರಿನೇತ್ರ ಮಹಂತಶಿವಯೋಗಿಸ್ವಾಮೀಜಿ, ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ), ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಡಾ.ಬಿ.ವಿ.ವಸಂತಕುಮಾರ್, ಪ್ರೊ.ಕವಿತಾ ರೈ, ಮಡ್ಡಿಕೆರೆ ಗೋಪಾಲ್, ಡಾ.ಬಿ.ಸಿ.ಚಿಲ್ಕರಾಗಿ, ಬಿ.ನಾಗೇಶ್ ಇನ್ನಿತರರಿದ್ದರು. 
ಮೈಸೂರು

ಮಹಾಭಾರತ, ರಾಮಾಯಣ ಸಂಸ್ಕೃತಿಯ ಕಣ್ಣುಗಳು : ಸಾಹಿತಿ ಸಿಪಿಕೆ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ‘ಮಹಾಭಾರತ ಮತ್ತು ರಾಮಾಯಣ’ ಮಹಾಕಾವ್ಯಗಳು
  • ಪ್ರೊ.ಹಂಪನಾ ನಾಗರಾಜಯ್ಯ ಅವರಿಂದ ಭಾರತೀಯ ಸಂಸ್ಕೃತಿಯ ಶ್ವಾಸಕೋಶಗಳು ಎಂದು ಬಣ್ಣನೆ
  • ಅದ್ಭುತ ಕೃತಿಗಳಾದ ಮಹಾಭಾರತ ಮತ್ತು ರಾಮಾಯಣದಲ್ಲಿ ಯಾವುದು ಮೊದಲು ಎಂಬುದು ಈಗಲೂ ಚರ್ಚಾಸ್ಪದ ವಿಷಯವೇ.
  • ವಾಲ್ಮೀಕಿ ಮಹರ್ಷಿ ರಚಿಸಿರುವ ಮೂಲ ರಾಮಾಯಣ ಆಧರಿಸಿ ಅನೇಕ ಕೃತಿಗಳು ಪ್ರಕಟ
ಮೈಸೂರು: ಮಹಾಭಾರತ ಮತ್ತು ರಾಮಾಯಣ ಗ್ರಂಥಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) ಹೇಳಿದರು.
ಶ್ರೀ ವಾಸವಿ ಪ್ರಕಾಶನ, ತಿಪ್ಪೂರಿನ ಮಿತ್ರಕೂಟದ ಸಹಯೋಗದಲ್ಲಿ ನಗರದ ಮಾನಸಗಂಗೋತ್ರಿ ರಾಣಿಬಹಾದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೃಷ್ಣ ತಿಪ್ಪೂರು ಅವರ ‘ಅಮೃತ ರಾಮಾಯಣ’ ಎರಡು ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಹಾಭಾರತ ಮತ್ತು ರಾಮಾಯಣ’ ಮಹಾಕಾವ್ಯಗಳನ್ನು ಪ್ರೊ.ಹಂಪನಾ ನಾಗರಾಜಯ್ಯ ಅವರು ಇವು ಭಾರತೀಯ ಸಂಸ್ಕೃತಿಯ ಶ್ವಾಸಕೋಶಗಳು ಎಂದು ಬಣ್ಣಿಸಿದ್ದಾರೆ. ನಾನೂ ಇವುಗಳನ್ನು ಎರಡು ಕಣ್ಣುಗಳು ಎಂದು ವ್ಯಾಖ್ಯಾನಿಸಿದ್ದೇನೆ ಎಂದರು.
ಅದ್ಭುತ ಕೃತಿಗಳಾದ ಮಹಾಭಾರತ ಮತ್ತು ರಾಮಾಯಣದಲ್ಲಿ ಯಾವುದು ಮೊದಲು ಎಂಬುದು ಈಗಲೂ ಚರ್ಚಾಸ್ಪದ ವಿಷಯವೇ. ವಿದ್ವಾಂಸರ ಪ್ರಕಾರ, ರಾಮಾಯಣವು ಮಹಾಭಾರತಕ್ಕಿಂತ ಮೊದಲು ನಡೆದಿದೆ.
ರಾಮಾಯಣವು ತ್ರೇತಾಯುಗದಲ್ಲಿ ನಡೆದರೆ, ಮಹಾಭಾರತವು ದ್ವಾಪರ ಯುಗದಲ್ಲಿ ನಡೆದಿದೆ. ಇದರರ್ಥ ರಾಮಾಯಣವು ಮಹಾಭಾರತಕ್ಕಿಂತ ಸುಮಾರು ಒಂದು ಯುಗ ಮೊದಲು ಸಂಭವಿಸಿದೆ. ಈ ಎರಡು ಮಹಾಕಾವ್ಯಗಳಲ್ಲಿ ಕಂಡುಬರುವ ಪಾತ್ರಗಳ ಆಧಾರದ ಮೇಲೆ ರಾಮಾಯಣವು ಮೊದಲು ಸಂಭವಿಸಿರುವುದಕ್ಕೆ ಪುರಾವೆಗಳು ಇವೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ವಾಲ್ಮೀಕಿ ಮಹರ್ಷಿ ರಚಿಸಿರುವ ಮೂಲ ರಾಮಾಯಣ ಮಹಾಕಾವ್ಯವನ್ನು ಆಧರಿಸಿ ಅನೇಕ ಕೃತಿಗಳು, ಅನೇಕ ಭಾಷೆಯಲ್ಲಿ ಪ್ರಕಟಗೊಂಡಿವೆ. ಇದನ್ನು ಆಧರಿಸಿ ಕೃತಿ ಬರೆಯುವುದು ಸುಲಭವಲ್ಲ.
ಈಗಲೂ ಅನೇಕ ಕೃತಿಗಳು ಬರುತ್ತಿವೆ. ಒಂದೊಂದು ಪಾತ್ರವನ್ನು ಇಟ್ಟುಕೊಂಡು ಕೃತಿಗಳನ್ನು ರಚಿಸಲಾಗಿದೆ. ಇದನ್ನು ಆಧರಿಸಿ ಕುವೆಂಪು ಅವರು ರಾಮಯಣ ದರ್ಶನಂ ರಚಿಸಿ ಸಾಹಿತ್ಯಲೋಕಕ್ಕೆ ಕೊಟ್ಟಿದ್ದಾರೆ ಎಂದರು.
ಶ್ರೀರಂಗಪಟ್ಟಣದ ಬೇಬಿಮಠ, ಚಂದ್ರವನ ಆಶ್ರಮದ ಪೀಠದ ಶ್ರೀ ತ್ರಿನೇತ್ರ ಮಹಂತಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಿ.ರವಿಶಂಕರ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಮುಕ್ತ ವಿವಿಯ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ.ಕವಿತಾ ರೈ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಿ.ಸಿ.ಚಿಲ್ಕರಾಗಿ, ಸಂಘದ ಅಧ್ಯಕ್ಷ ಬಿ.ನಾಗೇಶ್, ಕೃತಿ ಕರ್ತೃ ಕೃಷ್ಣ ತಿಪ್ಪೂರು, ಶ್ರೀ ವಾಸವಿ ಪ್ರಕಾಶನದ ಎಂ.ಆರ್. ಮಂಜುನಾಥಗುಪ್ತಾ, ಮಿತ್ರಕೂಟದ ದೊರೆಸ್ವಾಮಿ ಇದ್ದರು.