ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ದಂಪತಿಯನ್ನು ಅಭಿನಂದಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಡಾ.ಭಾಷ್ಯಂ ಸ್ವಾಮಿ, ಡಾ.ಡಿ.ತಿಮ್ಮಯ್ಯ, ಡಾ.ಸಿ.ಪಿ.ಕೃಷ್ಣಕುಮಾರ್, ಅಂಶಿ ಪ್ರಸನ್ನಕುಮಾರ್, ಮಾನಸ, ಡಾ.ರಾಜಶೇಖರ ಕದಂಬ ಇದ್ದರು.
- ನಾಡೋಜ ಹಂಪಾ ನಾಗರಾಜಯ್ಯ ಹೇಳಿಕೆ
- ಅಭಿನಂದನಾ ಗ್ರಂಥ ಬಿಡುಗಡೆ
ಕನ್ನಡ ಸಾಹಿತ್ಯ, ಸಂಘಟನೆ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರ ಅಭಿನಂದನಾ ಸಮಾರಂಭ ನಗರದ ಕಲಾಮಂದಿರದಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ‘ಮಡ್ಡೀಕೆರೆ ಮಾಣಿಕ್ಯ ನಮ್ಮ ಗೋಪಾಲ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.
ನಾಡೋಜ ಹಂಪಾ ನಾಗರಾಜಯ್ಯ ಮಾತನಾಡಿ, ಕನ್ನಡಕ್ಕೆ, ನಾಡಿಗೆ ಏನೇ ಸಮಸ್ಯೆ ಎದುರಾದರೂ ಮಡ್ಡೀಕೆರೆಯವರ ಹೃದಯ ಮಿಡಿಯುತ್ತದೆ. ಅವರ ಹೃದಯ ಕೇವಲ ಮಾಂಸದ ಮುದ್ದೆಯಲ್ಲ, ಕನ್ನಡದ ಬಗ್ಗೆ ಅಪಾರ ಕಾಳಜಿ ಮತ್ತು ಬದ್ಧತೆ ಹೊಂದಿರುವ ಭಾವಗಳ ಸಂಗಮವಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ಅವರು ನಿರಂತರವಾಗಿ ಶ್ರಮಿಸಿದ್ದಾರೆ. ಇಂತಹ ಕನ್ನಡದ ನಿಷ್ಠಾವಂತ ಸೇವಕರು ಶತಾಯುಷಿಯಾಗಿ ಬಾಳಬೇಕು ಎಂದು ಹಾರೈಸಿದರು.
ಅಭಿನಂದನಾ ನುಡಿಗಳನ್ನಾಡಿದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ, ಮಡ್ಡೀಕೆರೆ ಗೋಪಾಲ್ ಅವರ ವ್ಯಕ್ತಿತ್ವ, ಸಾಹಿತ್ಯ ಸೇವೆ ಹಾಗೂ ಸಂಘಟನಾ ಚಟುವಟಿಕೆಗಳನ್ನು ಕೊಂಡಾಡಿದರು. ವಕೀಲ ವೃತ್ತಿಯಲ್ಲಿದ್ದರೂ ಕನ್ನಡದ ಕೈಂಕರ್ಯವನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಅವರು ಹಲವು ಕನ್ನಡ ಸಂಘಟನೆಗಳನ್ನು ಕಟ್ಟಿಬೆಳೆಸಿದ್ದಾರೆ. ಶಾಲೆಗಳನ್ನು ದತ್ತು ಸ್ವೀಕರಿಸುವುದು, ಕನ್ನಡಪರ ಕಾರ್ಯಕ್ರಮಗಳನ್ನು ಸಂಘಟಿಸುವುದು, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಡ್ಡೀಕೆರೆ ಗೋಪಾಲ್ ಅವರ ನಾಯಕತ್ವ ಗುಣ, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹಾಗೂ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಮನೋಭಾವ ಅವರನ್ನು ವಿಶಿಷ್ಟ ವ್ಯಕ್ತಿತ್ವವನ್ನಾಗಿ ರೂಪಿಸಿದೆ. ಅವರ ಯಶಸ್ಸಿನ ಹಿಂದೆ ಪತ್ನಿ ಅನಸೂಯಾ ಗೋಪಾಲ್ ಅವರ ಸಹಕಾರವೂ ಪ್ರಮುಖವಾಗಿದೆ ಎಂದು ನಾಗಣ್ಣ ಅಭಿಪ್ರಾಯಪಟ್ಟರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿನ ತಮ್ಮ ಪಯಣವನ್ನು ಸ್ಮರಿಸಿದರು. ಮೊದಲ ಬಾರಿಗೆ ಪರಿಷತ್ ಅಧ್ಯಕ್ಷರಾದ ಸಂದರ್ಭದ ಅನುಭವಗಳು, ನಂತರ ನಡೆದ ಚುನಾವಣೆಯಲ್ಲಿ ಕೋವಿಡ್ ಸೋಂಕಿನ ನಡುವೆಯೂ ಸಹೋದ್ಯೋಗಿಗಳಾದ ವೈ.ಡಿ.ರಾಜಣ್ಣ, ಎಂ. ಚಂದ್ರಶೇಖರ್ ಸೇರಿದಂತೆ ಹಲವರ ಸಹಕಾರದಿಂದ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ವಿಚಾರವನ್ನು ನೆನಪಿಸಿಕೊಂಡರು. ತಮ್ಮ ಸಾಧನೆಗಿಂತಲೂ ಹೆಚ್ಚಿನ ಗೌರವವನ್ನು ಈ ಅಭಿನಂದನಾ ಸಮಾರಂಭ ಮತ್ತು ಅಭಿನಂದನಾ ಗ್ರಂಥಗಳು ನೀಡಿದ್ದು, ಇದರಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಹೃದಯವಂತ’, ‘ಕಥಾಗುಚ್ಚ’ ಕಥಾಸಂಕಲನ ಹಾಗೂ ‘ಸ್ನೇಹಶೀಲ’ ಕಾವ್ಯ ಅಭಿನಂದನಾ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಡಾ.ಜಿ.ಎಸ್.ಭಟ್ಟ, ಕೆ.ಟಿ.ವೀರಪ್ಪ, ಧಾರ್ಮಿಕ ಕ್ಷೇತ್ರದಲ್ಲಿ ಇಳೈ ಆಳ್ವಾರ್ ಸ್ವಾಮಿ, ಸಂಘಟನೆ ಕ್ಷೇತ್ರದಲ್ಲಿ ಪ್ರೊ.ನೀ.ಗಿರಿಗೌಡ, ಪತ್ರಕರ್ತ ಗೌರಿಸತ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ಪುಷ್ಪಾ ಅಯ್ಯಂಗಾರ್, ಡಿ. ಮಾದೇಗೌಡ, ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಎಂ.ಜಿ.ಆರ್.ಅರಸು, ರಂಗಭೂಮಿ ಕ್ಷೇತ್ರದಲ್ಲಿ ಪ್ರೊ.ಎಚ್.ಎಸ್.ಉಮೇಶ್, ಕಾನೂನು ಸೇವೆಯಲ್ಲಿ ಕೆ.ಸುಕನ್ಯಾ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಚ್.ಬಿ.ರಾಜಶೇಖರ ಅವರನ್ನು ಹಿರಿಯ ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್ ಮತ್ತು ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ್ ವಿ.ಬೈರಿ ಅಭಿನಂದಿಸಿದರು.
ಅಲ್ಲದೆ ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ವಿದ್ವಾಂಸ ಡಾ.ಸಿ.ಪಿ.ಕೃಷ್ಣಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ರಾಜಶೇಖರ ಕದಂಬ, ಚಿಂತಕ ಡಾ. ಗುಬ್ಬಿಗೂಡು ರಮೇಶ್, ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ, ಮ.ನ.ಲತಾ ಮೋಹನ್ ಇತರರಿದ್ದರು.