ವಿಶ್ವಮಟ್ಟದ ಸೈಕ್ಲಿಂಗ್ ಸ್ಪರ್ಧೆ 
ಮೈಸೂರು

ಮೈಸೂರಿನಲ್ಲಿ ಅಕ್ಟೋಬರ್ 4ರಂದು ವಿಶ್ವಮಟ್ಟದ ಸೈಕ್ಲಿಂಗ್ ಸ್ಪರ್ಧೆ

ಕೆ. ಜೆ. ಜಾರ್ಜ್, ಸನ್ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ — ಮೈಸೂರು ಅರಮನೆಯ ದ್ವಾರದಿಂದ ರೇಸ್‌ಗೆ ಚಾಲನೆ ನೀಡಲಿದ್ದಾರೆ

ಮೈಸೂರು: ಅಕ್ಟೋಬರ್ ೪, ೨೦೨೬ ರಂದು ಭಾರತದ ಮೊದಲ ಆವೃತ್ತಿಯ 'ಲ ಎಟಾಪ್ ಬೈ ಟೂರ್ ಡಿ ಫ್ರಾನ್ಸ್' (L'Étape by Tour de France) ಆಯೋಜಿಸಲು ಮೈಸೂರು ನಗರ ಸಜ್ಜಾಗುತ್ತಿದ್ದು, ವಿಶ್ವದಾದ್ಯಂತದ ಸೈಕಲ್ ಪಟುಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ರೇಸ್ ವಾರವು ತೀರಾ ಹತ್ತಿರದಲ್ಲಿರುವುದರಿಂದ, ರೇಸ್ ದಿನದ ಬೆಳಗಿನ ವೇಳೆಗೆ ಮುಂಚಿತವಾಗಿ ಮಾರ್ಗ ಗುರುತಿಸುವಿಕೆ, ಕಾರ್ಯಕ್ರಮದ ಮೂಲಸೌಕರ್ಯ ಹಾಗೂ ಅಂತಿಮ ಕಾರ್ಯಾಚರಣೆಯ ವ್ಯವಸ್ಥೆಗಳೊಂದಿಗೆ ಆರಂಭ ಮತ್ತು ಮುಕ್ತಾಯದ ಸ್ಥಳಗಳಲ್ಲಿ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.

ಎನ್‌ಇಬಿ ಸ್ಪೋರ್ಟ್ಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ, ವಿಶ್ವಪ್ರಸಿದ್ಧ Tour de France ನಿಂದ ಪ್ರೇರಿತವಾದ ಅಧಿಕೃತ ಅಮೆಚೂರ್ ಸೈಕ್ಲಿಂಗ್ ಸ್ಪರ್ಧೆಯಾದ L’Étape Mysuru by Tour de France ಅನ್ನು ಅಕ್ಟೋಬರ್ 4ರಂದು ಮೈಸೂರಿನಲ್ಲಿ ಆಯೋಜಿಸಲಾಗುತ್ತಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪ್ರತಿಷ್ಠಿತ ಜಾಗತಿಕ ಸೈಕ್ಲಿಂಗ್ ಅನುಭವವು ಮೈಸೂರಿನ ಐತಿಹಾಸಿಕ ಪರಂಪರೆ, ಪ್ರವಾಸೋದ್ಯಮ ಹಾಗೂ ಕ್ರೀಡಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲಿದೆ.

ಚಾಮುಂಡಿ ಬೆಟ್ಟ – ಪ್ರಮುಖ ಆಕರ್ಷಣೆ

L’Étape Mysuru ಮಾರ್ಗವು ಮೈಸೂರಿನ ಪ್ರಮುಖ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳ ಮೂಲಕ ಸಾಗಲಿದ್ದು, ಸ್ಪರ್ಧೆಯ ಪ್ರಮುಖ ಸವಾಲಾಗಿ ಚಾಮುಂಡಿ ಬೆಟ್ಟದ ಏರಿಕೆಯನ್ನು King of the Mountain (KOM) ವಿಭಾಗವಾಗಿ ಗುರುತಿಸಲಾಗಿದೆ.

ಈ ಏರಿಕೆಯಲ್ಲಿ ಸವಾರರ ಸಮಯವನ್ನು ಪ್ರತ್ಯೇಕವಾಗಿ ದಾಖಲಿಸಲಾಗುತ್ತದೆ. ಅತ್ಯಂತ ವೇಗವಾಗಿ ಚಾಮುಂಡಿ ಬೆಟ್ಟದ ಏರಿಕೆಯನ್ನು ಪೂರ್ಣಗೊಳಿಸುವ ಪುರುಷ ಮತ್ತು ಮಹಿಳಾ ಸವಾರರಿಗೆ ಪ್ರತಿಷ್ಠಿತ Polka Dot Jersey ಪ್ರದಾನ ಮಾಡಲಾಗುತ್ತದೆ.

Tour de France ಮಾದರಿಯ ಜರ್ಸಿ ವಿಭಾಗಗಳು

ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಸವಾರರಿಗೆ Tour de France ನ ಪ್ರಸಿದ್ಧ ಜರ್ಸಿ ವ್ಯವಸ್ಥೆಯ ಮಾದರಿಯಲ್ಲಿ ಗೌರವ ನೀಡಲಾಗುತ್ತದೆ:

ಹಳದಿ ಜರ್ಸಿ: ಒಟ್ಟಾರೆ ಪುರುಷ ಮತ್ತು ಮಹಿಳಾ ವಿಜೇತರಿಗೆ

ಹಸಿರು ಜರ್ಸಿ: ಸ್ಪ್ರಿಂಟ್ ವಿಭಾಗದ ವೇಗದ ಪುರುಷ ಮತ್ತು ಮಹಿಳಾ ಸವಾರರಿಗೆ

ಪೋಲ್ಕಾ ಡಾಟ್ ಜರ್ಸಿ: ಚಾಮುಂಡಿ ಬೆಟ್ಟದ KOM ಏರಿಕೆಯಲ್ಲಿ ವೇಗದ ಪುರುಷ ಮತ್ತು ಮಹಿಳಾ ಸವಾರರಿಗೆ

ಬಿಳಿ ಜರ್ಸಿ: ಅತ್ಯುತ್ತಮ ಯುವ ಸವಾರರಿಗೆ

ನಾಲ್ಕು ವಿಭಾಗಗಳಲ್ಲಿ ಸೈಕ್ಲಿಂಗ್ ಅನುಭವ

ವೃತ್ತಿಪರ ಹಾಗೂ ಸ್ಪರ್ಧಾತ್ಮಕ ಸೈಕ್ಲಿಸ್ಟ್‌ಗಳಿಂದ ಹಿಡಿದು ಕುಟುಂಬಗಳು ಮತ್ತು ಮಕ್ಕಳವರೆಗೆ ಎಲ್ಲರೂ ಭಾಗವಹಿಸಲು ಅನುಕೂಲವಾಗುವಂತೆ ನಾಲ್ಕು ವಿಭಾಗಗಳನ್ನು ಪರಿಚಯಿಸಲಾಗಿದೆ:

100 ಕಿಮೀ – The Race: ಸ್ಪರ್ಧಾತ್ಮಕ ಸೈಕ್ಲಿಸ್ಟ್‌ಗಳಿಗಾಗಿ

50 ಕಿಮೀ – The Ride: ಫಿಟ್‌ನೆಸ್ ಮತ್ತು ಸೈಕ್ಲಿಂಗ್ ಉತ್ಸಾಹಿಗಳಿಗಾಗಿ

20 ಕಿಮೀ – Family Fun Ride: ಎಲ್ಲಾ ವಯೋಮಾನದವರಿಗಾಗಿ

1 ಕಿಮೀ – Kids & Community Ride: ಮಕ್ಕಳು ಮತ್ತು ಸಮುದಾಯದವರಿಗಾಗಿ

ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತೊಂದು ವೇದಿಕೆ

ಮೈಸೂರಿನ ಅರಮನೆಗಳು, ಪಾರಂಪರಿಕ ತಾಣಗಳು ಹಾಗೂ ಚಾಮುಂಡಿ ಬೆಟ್ಟದಂತಹ ಪ್ರಮುಖ ಆಕರ್ಷಣೆಗಳನ್ನು ಒಳಗೊಂಡ ಮಾರ್ಗವು ಸೈಕ್ಲಿಸ್ಟ್‌ಗಳಿಗೆ ವಿಭಿನ್ನ ಅನುಭವ ನೀಡುವುದರ ಜತೆಗೆ, ಮೈಸೂರಿನ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ದೇಶ-ವಿದೇಶಗಳ ಸೈಕ್ಲಿಂಗ್ ಸಮುದಾಯಕ್ಕೆ ಪರಿಚಯಿಸಲಿದೆ.

Tour de France ಆಯೋಜಕರಾದ Amaury Sport Organisation (ASO) ನಡೆಸುವ ಅಧಿಕೃತ L’Étape ಸರಣಿಯ ಭಾಗವಾಗಿರುವ ಈ ಕಾರ್ಯಕ್ರಮವು ಮೈಸೂರನ್ನು ಜಾಗತಿಕ ಸೈಕ್ಲಿಂಗ್ ನಕ್ಷೆಯಲ್ಲಿ ಗುರುತಿಸುವ ಮಹತ್ವದ ಹೆಜ್ಜೆಯಾಗಿದೆ.

ಸಾಮಾಜಿಕ ಕಾಳಜಿಗೂ ಆದ್ಯತೆ

ಕಾರ್ಯಕ್ರಮವು ಸೀತಾ ಭತೇಜಾ ಚಾರಿಟೇಬಲ್ ಟ್ರಸ್ಟ್‌ನ ‘Giving Back’ ಉಪಕ್ರಮಕ್ಕೂ ಬೆಂಬಲ ನೀಡಲಿದೆ. ಆರ್ಥಿಕವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದವರಿಗೆ ಉಚಿತ ಹಾಗೂ ಸಬ್ಸಿಡಿ ದರದಲ್ಲಿ ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ನೋಂದಣಿ ಆರಂಭ

L’Étape Mysuru by Tour de France ನಲ್ಲಿ ಭಾಗವಹಿಸಲು ನೋಂದಣಿ ಆರಂಭಗೊಂಡಿದ್ದು, ಸೆಪ್ಟೆಂಬರ್ 25, 2026ರಂದು ನೋಂದಣಿ ಮುಕ್ತಾಯಗೊಳ್ಳಲಿದೆ.

ನೋಂದಣಿಗಾಗಿ:

https://mysamay.in/public/event/info/4379fa0a-2cdf-47d5-bd70-d1f998de819f