ಸೌಹಾರ್ದ ಕರ್ನಾಟಕ ಮೈಸೂರು ಘಟಕದ ವತಿಯಿಂದ ನಗರದಲ್ಲಿ ಸೌಹಾರ್ದ ನಡಿಗೆ ಜಾಥಾ ನೆರವೇರಿತು.
ಮೈಸೂರು: ಗಾಂಧೀಜಿ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ಮೈಸೂರು ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಸೌಹಾರ್ದ ನಡಿಗೆ ಜಾಥಾ ನೆರವೇರಿತು.
ನಗರದ ಸೇಂಟ್ ಫಿಲೋಮಿನಾ ಚರ್ಚ್ ಮುಂಭಾಗದಿಂದ ಆರಂಭಗೊಂಡ ಜಾಥಾವು ಆಜಾಮ್ ಮಸೀದಿ, ಅಶೋಕ ರಸ್ತೆ ಮೂಲಕ ಗಾಂಧಿ ಚೌಕದ ವರೆಗೆ ನಡೆಯಿತು.
ಪ್ರಗತಿಪರ ಚಿಂತಕರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿಯಾಗಿ ದಾರ್ಶನಿಕರ ಸೌಹಾರ್ದತೆ ಸಾರುವ ಬರಹಗಳ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು. ಜತೆಗೆ ಸಾರ್ವಜನಿಕರಲ್ಲಿ ಸೌಹಾರ್ದ ಬಗ್ಗೆ ಅರಿವು ಮೂಡಿಸಿದರು. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಚಿಕ್ಕಗಡಿಯಾರದ ಬಳಿ ಹಿರಿಯ ರಂಗಕರ್ಮಿ ರಂಗಕರ್ಮಿ ಎನ್.ಜನಾರ್ದನ್ (ಜನ್ನಿ) ಮತ್ತು ದೇವಾನಂದವರಪ್ರಸಾದ್ ಮತ್ತು ತಂಡದವರು ಸೌಹಾರ್ದ ಗೀತೆ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಪ್ರಗತಿಪರ ಸಂಘಟನೆಗಳು, ರೈತ ಸಂಘ, ಪ್ರಾಂತ ರೈತ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಮೈಸೂರು ವಿವಿ ಸಂಶೋಧಕರ ಸಂಘ ಸಂಶೋಧಕರು ಪಾಲ್ಗೊಂಡು ಹೆಜ್ಜೆ ಹಾಕಿದರು.
ಚಿಂತಕಿ ಸಬಿಹಾ ಭೂಮಿಗೌಡ ವಾತನಾಡಿ, ಪ್ರಸ್ತುತ ಸಮಾಜದಲ್ಲಿ ಪ್ರೀತಿ, ಸಂಬಂಧವನ್ನು ಮರುರಚಿಸುವ ಅವಶ್ಯಕತೆ ಇದೆ. ಅದಕ್ಕಿರುವ ಅಡ್ಡಿಗಳನ್ನು ಪ್ರಶ್ನಿಸಿ, ಅವನ್ನೂ ಮೀರಿ ಮುಂದುವರೆಯಬೇಕು. ಎಲ್ಲರೂ ಜತೆಯಾಗಿ ಜೀವನ ಮಾಡಬೇಕು ಎಂದರು.
ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಮಾತನಾಡಿ, ಗಾಂಧೀಜಿ ಹತ್ಯೆಯ ಮೂಲಕ ಸತ್ಯ, ಅಹಿಂಸೆ, ಸತ್ಯಾಗ್ರಹ, ಕಾರುಣ್ಯ, ಸಹಾಬಾಳ್ವೆಗೆ ಗುಂಡಿನ ದಾಳಿ ನಡೆದ ದಿನವಾಗಿದೆ. ಸಮಾಜ ಹದಗೆಟ್ಟು ಬಹಳ ದುರಿತ ದಿನಗಳನ್ನು ನಾವು ಅನುಭವಿಸುತ್ತಿದ್ದೇವೆ. ಹುತಾತ್ಮರ ದಿನಕ್ಕೆ ಅರ್ಥ ಕೊಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀ ಅವರ ಆಶಯಗಳನ್ನು ಪುನರ್ ಸ್ಥಾಪಿಸಬೇಕು ಎಂದರು.
ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು, ಸವಿತಾ ಪ.ಮಲ್ಲೇಶ್, ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಪ್ರಗತಿಪರರಾದ ಚಿಂತಕ ಪ್ರೊ.ಕಾಳಚೆನ್ನೇಗೌಡ, ಪಂಡಿತಾರಾಧ್ಯ, ಅಹಿಂದ ಜವರಪ್ಪ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ, ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್, ಜಿ.ಪಿ.ಬಸವರಾಜು, ಗೋಪಿನಾಥ್, ಪ್ರಭಾಕರ್, ಶ್ರೀದೇವಿ, ಲತಾ ಕೆ.ಬಿದ್ದಪ್ಪ, ಕೆ.ಬಸವರಾಜು, ಚಿರಾಗ್ ಮೂರ್ತಿ ಇತರರಿದ್ದರು.