- ಸರ್ಕಾರ ಜಾರಿಗೊಳಿಸಿರುವ ಕನಿಷ್ಠ ವೇತನದಿಂದ ಉದ್ಯಮ ವಲಯಕ್ಕೆ ತೀವ್ರ ನಷ್ಟವಾಗುತ್ತದೆ
- ತೆರಿಗೆ ಸೇರಿದಂತೆ ಅಗತ್ಯ ಬೆಲೆ ಏರಿಕೆಯಿಂದ ಈಗಾಲೇ ಸಂಕಷ್ಟಕ್ಕೆ ಉದ್ಯಮಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ
ಮೈಸೂರು:ರಾಜ್ಯ ಸರ್ಕಾರ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಕನಿಷ್ಠ ವೇತನದಿಂದ ಉದ್ಯಮ ವಲಯವು ತೀವ್ರ ನಷ್ಟ ಅನುಭವಿಸಿ, ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರ ಹಿತ ದೃಷ್ಟಿಯಿಂದ ಜಾರಿಗೊಳಿಸಿರುವ ಕನಿಷ್ಠ ವೇತನದಿಂದ ಉದ್ಯಮ ವಲಯಕ್ಕೆ ತೀವ್ರ ನಷ್ಟವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಏರಿಕೆ, ಉದ್ಯಮ ವಲಯದ ಕಚ್ಚಾವಸ್ತುಗಳ ಬೆಲೆ ಏರಿಕೆ, ಇಂಧನ ದರ ಏರಿಕೆಯಿಂದ ಸಂಕಷ್ಟಕ್ಕೆ ಉದ್ಯಮಗಳು ಅದಾಗಲೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.
ಈ ಸಂಕಷ್ಟದಲ್ಲಿ ಸಿಲುಕಿರುವ ಉದ್ಯಮ ವಲಯವನ್ನು ರಕ್ಷಿಸಬೇಕಾದ ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ವೇತನ ಹೆಚ್ಚಳವೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿ ಮುಚ್ಚಿಹೋಗಿವೆ. ಈಗ ಯುದ್ಧ, ಬೆಲೆ ಏರಿಕೆ. ಎಐ ತಂತ್ರಜ್ಞಾನ ಮುಂತಾದ ಕಾರಣಗಳಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಹಾಗೆಯೇ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ಉದ್ಯಮ ವಲಯ ಮಾತ್ರವಲ್ಲದೆ, ಸಾಮಾನ್ಯ ಜನರು ಕೂಡ ಬೆಲೆ ಏರಿಕೆಯ ಭಾರಕ್ಕೆ ನಲುಗಿಹೋಗಿದ್ದಾರೆ. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಿ ಉದ್ಯಮ ನಡೆಸುವುದು ಅಸಾಧ್ಯವಾದದ್ದು. ಆದ್ದರಿಂದ ಸರ್ಕಾರ ಈ ವಿಷಯದಲ್ಲಿ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಈ ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.