ಪಿರಿಯಾಪಟ್ಟಣದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಡಿವೈಎಸ್ಪಿ ಗಳಾದ ಶೈಲೇಂದ್ರ ಕುಮಾರ್ ಮತ್ತು ವೆಂಕಟೇಶ್ ರವರು ಲೋಡಿಂಗ್ ಆಗುತಿದ್ದ ಲಾರಿಗಳನ್ನು ಪರಿಶೀಲಿಸುತ್ತಿರುವುದು.
ಪಿರಿಯಾಪಟ್ಟಣ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುತ್ತಿರುವ ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮವಾಗಿ ರೈತರಿಂದ ನಾಲ್ಕು ಕೆಜಿ ತೂಕ ಕಡಿತ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಪಟ್ಟಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ದಾಳಿ ನಡೆಸಿ ಪರಿಶೀಲಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಕುಮಾರ್ ನೇತೃತ್ವದ ತಂಡ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಗಿ ಖರೀದಿ ಕೇಂದ್ರದ ಸಿಬ್ಬಂದಿ ಪರಾರಿಯಾಗಿದ್ದರು.
ಸಂಜೆ 4 ಗಂಟೆವರೆಗೂ ಸಿಬ್ಬಂದಿಗಾಗಿ ಕಾದು ಕುಳಿತ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಖರೀದಿ ಕೇಂದ್ರದ ಉಸ್ತುವಾರಿ ವಹಿಸಿದ್ದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಾಜರಾಗಿಲ್ಲ. ಹಾಗಾಗಿ ಸ್ಥಳದಲ್ಲಿ ಹಾಜರಿದ್ದ ರೈತರಿಂದ ಹೇಳಿಕೆಗಳನ್ನು ಪಡೆದು ಮಹಜರ್ ಪ್ರಕ್ರಿಯೆ ನಡೆಸಿದರು.
ರೈತರಿಂದ ರಾಗಿ ಖರೀದಿಸಲು ಕೊನೆಯ ದಿನವಾದ ಶುಕ್ರವಾರ ಲಾರಿಗಳಿಗೆ ತುಂಬಿಸಲು ಮೂಟೆಗಳನ್ನು ಪರಿಶೀಲಿಸಿದಾಗ ದಪ್ಪ ಗಾತ್ರದ ಕಲ್ಲು, ಮರಳು ಮಿಶ್ರಿತ ಮಣ್ಣು, ಪ್ಲಾಸ್ಟಿಕ್ ಕಸ ಕಡ್ಡಿಗಳು ಇದ್ದಿದ್ದು ಕಂಡುಬಂತು. ತಡವಾಗಿ ಆಗಮಿಸಿದ ಎಫ್‌ಸಿಐ ಜಿಲ್ಲಾ ವ್ಯವಸ್ಥಾಪಕ ಕಿರಣ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್ ಕಳಪೆ ಗುಣಮಟ್ಟದ ರಾಗಿಯನ್ನು ಜನರ ಪಡಿತರ ವ್ಯವಸ್ಥೆಗೆ ನೀಡುವುದು ಸಾಧ್ಯವೇ, ಮಧ್ಯಾಹ್ನದಿಂದ ದಾಖಲೆ ಸಹಿತ ಹಾಜರಾಗುವಂತೆ ನಿಮಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರೂ ಇಷ್ಟು ತಡವಾಗಿ ಬಂದಿದ್ದೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.