ಹುಣಸೂರು ನಗರದ ಎನ್‌ಇಎಸ್ ಕಾಲನಿಯ ನಿವಾಸಿ ಕೆ.ಪಿ.ಪ್ರಕಾಶ್ ಅವರ ಮನೆಯಲ್ಲಿ ಬೀರೋ ಲಾಕರ್ ಒಡೆರದಿರುವುದು.
ಹುಣಸೂರು : ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಎನ್‌ಇಎಸ್ ಕಾಲನಿಯ ನಿವಾಸಿಯೊಬ್ಬರ ಮನೆಯ ಬೀರೂವಿನ ಲಾಕರ್ ಒಡೆದು 149 ಗ್ರಾಂ ಚಿನ್ನಾಭರಣ ಮತ್ತು 5 ಲಕ್ಷ 35 ಸಾವಿರ ರೂ. ನಗದು ದೋಚಲಾಗಿದೆ.
ಖಾಸಗಿ ಟಿವಿ ವಾಹಿನಿಯ ಸಿಬ್ಬಂದಿ ಕೆ.ಪಿ.ಪ್ರಕಾಶ್ ಅಲಿಯಾಸ್ ಸಚಿನ್ ಪ್ರಕಾಶ್ ಅವರ ಮನೆಯಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದೆ. ಮನೆಯ ಸುತ್ತ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದರೋಡೆ ಮಾಡಿರುವ ಕಳ್ಳ ರಾಜಾರೋಷವಾಗಿ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ.
ಘಟನೆ ವಿವರ: ಕುಶಾಲನಗರದಲ್ಲಿರುವ ಅಣ್ಣನ ಮಗಳ ನಿಶ್ಚಿತಾರ್ಥ ಸಮಾರಂಭಕ್ಕೆ ಸಚಿನ್ ಅವರು ಪತ್ನಿ ವಿನೀತಾ ಅವರೊಂದಿಗೆ ಶನಿವಾರ ಮಧ್ಯಾಹ್ನ ತೆರಳಿದ್ದರು. ಬೆಂಗಳೂರಿನಲ್ಲಿರುವ ಸಚಿನ್ ಅವರ ಪುತ್ರ ಆರ್ಯನ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹುಣಸೂರಿಗೆ ಶನಿವಾರ ರಾತ್ರಿ 2.15ಕ್ಕೆ ಮನೆಗೆ ಬಂದಾಗ ಮನೆಯ ಮುಂಬಾಗಿಲ ಬೀಗ ಒಡೆದಿದ್ದು ಕಂಡುಬಂತು. ಗಾಬರಿಯಿಂದ ಮನೆಯೊಳಗೆ ತೆರಳಿದಾಗ ಮನೆಯ ಬೀರುವಿನ ಲಾಕರ್‌ಗಳು ಒಡೆಯಲಾಗಿತ್ತು. ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿದ್ದವು. ಲಾಕರ್‌ನಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಕೂಡಲೇ ತಂದೆಗೆ ಫೋನಿನಲ್ಲಿ ವಿಷಯ ಮುಟ್ಟಿಸಿದ್ದಾರೆ. ಭಾನುವಾರ ಬೆಳಗಿನ ಜಾವ 4 ಗಂಟೆಗೆ ಪ್ರಕಾಶ್ ಬಂದು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
40 ಗ್ರಾಂ ತೂಕದ ಚಿನ್ನದ ತಾಳಿ, 7 ಗ್ರಾಂ ತೂಕದ ಚಿನ್ನದ ಓಲೆ, 20 ಗ್ರಾಂ ತೂಕದ ಚಿನ್ನದ ಒಂದು ಜತೆ ಬಳೆ, 5 ಗ್ರಾಂ ತೂಕದ ಚಿನ್ನದ ಕಾಯಿನ್, ಒಟ್ಟು 7 ಗ್ರಾಂ ತೂಕದ ಎರಡು ಉಂಗುರಗಳು, 12 ಗ್ರಾಂ ತೂಕದ ಚಿನ್ನದ ಚೈನ್, 20 ಗ್ರಾಂ ತೂಕದ ಎರಡು ಪೆಂಡೆಂಟ್, 15 ಗ್ರಾಂ ತೂಕದ ಒಂದು ಡೈಮಂಡ್ ಉಂಗುರ, ಒಟ್ಟು 19 ಗ್ರಾಂ ತೂಕದ ಮೂರು ಓಲೆಗಳು, 4 ಗ್ರಾಂ ತೂಕದ ಎರಡು ಹುಕ್ಸ್‌ಗಳು ಹಾಗೂ 5 ಲಕ್ಷದ 35 ಸಾವಿರ ರೂ. ನಗದು ಕಳವಾಗಿದೆ ಎಂದು ಪ್ರಕಾಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಎಎಸ್ಪಿ ನಾಗೇಶ್, ಡಿವೈಎಸ್‌ಪಿ ರವಿ, ಪಟ್ಟಣಠಾಣೆ ಶಿವಮಾದಯ್ಯ ಮತ್ತವರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಬೇಧಿಸಲು ಪ್ರತ್ಯೇಕ ತಂಡವೊಂದನ್ನು ರಚಿಸಿ ತನಿಖೆ ನಡಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಧೈರ್ಯವೋ ಭಂಡತನವೋ: ಮನೆ ಸುತ್ತಮುತ್ತ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಮನೆಯ ಮುಂಭಾಗವಿರುವ ವಿಶಾಲ ಮೈದಾನದ ಮೂಲಕ ಮನೆಯ ಬಳಿ ಆಗಮಿಸುವ ಕಪ್ಪು ಜಾಕೆಟ್ ಧರಿಸಿದ್ದ ಒಬ್ಬನೇ ಕಳ್ಳ ಆರಾಮವಾಗಿ ಮೆಲ್ಲನೆ ನಡೆದುಕೊಂಡು ಬರುತ್ತಾನೆ. ಮನೆಯ ಗೋಡೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕಡೆಗೂ ಕಣ್ಣುಹಾಯಿಸುತ್ತಾನೆ. ಕಳ್ಳ ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕೂಡ ಸುತ್ತಿಕೊಂಡಿಲ್ಲ. ಮನೆಯಿಂದ ತೆರಳುವಾಗಿ ಕೈಯಲ್ಲಿ ಸಣ್ಣದಾದ ಬ್ಯಾಗ್ ಹಿಡಿದುಕೊಂಡು ಸ್ವಲ್ಪ ಅವಸರದಿಂದ ತೆರಳುತ್ತಿರುವ ದೃಶ್ಯ ಕಾಣ ಸಿಗುತ್ತದೆ. ಪಕ್ಕಾ ವೃತ್ತಿಪರ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಸಿಸಿ ಕ್ಯಾಮರಾ ದೃಶ್ಯಗಳಿಂದ ಸಾಬೀತಾಗುತ್ತದೆ.
ವರ್ಷದ ಹಿಂದೆ ಬಸ್ ನಿಲ್ದಾಣಕ್ಕೆ ಬೈಪಾಸ್ ರಸ್ತೆ ಮೂಲಕ ಪ್ರವೇಶಿಸುವ ಜಾಗದ ಬಳಿಯೇ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆಕೋರರು ದೋಚಿದ್ದರು. ಇದೀಗ ಬಸ್ ನಿಲ್ದಾಣದ ಸಮೀಪದ ಕಾಲನಿಯಲ್ಲಿಯೇ ಕಳ್ಳತನ ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ.