- ದುರ್ಬಲ ವಿದ್ಯಾರ್ಥಿಗಳು ಸಶಕ್ತ ದೇಶ ಕಟ್ಟಲು ಸಾಧ್ಯವಾಗುವುದಿಲ್ಲ
- ವಿದ್ಯಾವಂತರ ನಿರ್ಲಕ್ಷ್ಯವೇ ಅಪರಾಧಗಳಿಗೆ ಕಾರಣ
- ರ‌್ಯಾಗಿಂಗ್ ತಡೆಗಟ್ಟುವ ರೀತಿಗಳು ಹಾಗೂ ಸ್ವಯಂ ರಕ್ಷಣಾ ತಂತ್ರ ಅರಿತುಕೊಳ್ಳಬೇಕು
ಮೈಸೂರು: ದುರ್ಬಲ ವಿದ್ಯಾರ್ಥಿಗಳು ಸಶಕ್ತ ದೇಶ ಕಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸದೃಢ ದೇಶಕ್ಕೆ ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸರಸ್ವತಿಪುರಂ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎನ್.ಆರ್.ಭವ್ಯಾ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ರ‌್ಯಾಗಿಂಗ್ ತಡೆಗಟ್ಟುವಿಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತ ನಡವಳಿಕೆ ಕಂಡುಬಂದಾಗ ಪ್ರಶ್ನಿಸುವ, ಪ್ರತಿಭಟಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ಅಸಭ್ಯ ವರ್ತನೆ, ಅಪಾಯಕಾರಿ ನಡವಳಿಕೆ, ಅಡ್ಡಗಟ್ಟುವಿಕೆ, ಬೆದರಿಕೆ ಹಾಕುವುದು ಇವೆಲ್ಲ ರ‌್ಯಾಗಿಂಗ್ ಎನಿಸುತ್ತದೆ. ಇದರಿಂದ ನಿತ್ಯ ಜೀವನ, ಬದುಕು, ಭವಿಷ್ಯ ಹಾಳಾಗುತ್ತದೆ ಎಂದರು.
ಸಬ್‌ಇನ್‌ಸ್ಪೆಕ್ಟರ್ ವಿ.ಆರ್.ಶೇಷಾದ್ರಿ ಮಾತನಾಡಿ, ವಿದ್ಯಾವಂತರ ನಿರ್ಲಕ್ಷ್ಯವೇ ಅಪರಾಧಗಳಿಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕಾನೂನಿನ ಅರಿವು ಬೆಳೆಸಿಕೊಳ್ಳಬೇಕು. ರ‌್ಯಾಗಿಂಗ್ ತಡೆಗಟ್ಟುವ ರೀತಿಗಳು ಹಾಗೂ ಸ್ವಯಂ ರಕ್ಷಣಾ ತಂತ್ರ ಅರಿತುಕೊಳ್ಳಬೇಕು ಎಂದರು.
ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ, ಮುಖ್ಯಪೇದೆ ಕುಮಾರ್, ಪಿ.ಸಿ.ರೇಖಾ, ಕಾಲೇಜಿನ ರ‌್ಯಾಗಿಂಗ್ ತಡೆ ಘಟಕದ ಸಂಚಾಲಕಿ ಡಾ.ಲೋಕೇಶ್ವರಿ ಹಾಗೂ ಸಮಿತಿ ಸದಸ್ಯರು ಇದ್ದರು.