ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಎನ್‌ಎಸ್‌ಎಸ ಸ್ವಯಂ ಸೇವಕ ಮತ್ತು ಸೇವಕಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಬಿ.ಶಿವರಾಜು ಉದ್ಘಾಟಿಸಿದರು. ಬಿ.ನಿರಂಜನಮೂರ್ತಿ, ಡಾ.ರೇಚಣ್ಣ, ಡಾ.ಎ.ಜಿ.ಧರ್ಮೇಶ, ಎನ್.ಅನುಷಾ ಇನ್ನಿತರರಿದ್ದರು. 
ಮೈಸೂರು

ಸಮಾಜಮುಖಿಯಾಗಿ ಜೀವನ ನಡೆಸುವುದು ನಿಜವಾದ ವ್ಯಕ್ತಿತ್ವ ವಿಕಸನ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಗಾಂಧಿ ಭವನದ ಸಲಹೆಗಾರ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಬಿ.ಶಿವರಾಜು ಅಭಿಮತ
ಮೈಸೂರು: ಎನ್‌ಎಸ್‌ಎಸ್‌ನ ಧ್ಯೇಯದ ಅನುಗುಣವಾಗಿ ಜೀವನ ರೂಪಿಸಿಕೊಂಡರೆ ಜೀವನದಲ್ಲಿ ಎಂದೂ ಸೋಲು ಬರುವುದಿಲ್ಲ. ಸಮಾಜಮುಖಿಯಾಗಿ ಜೀವನ ನಡೆಸುವುದು ನಿಜವಾದ ವ್ಯಕ್ತಿತ್ವ ವಿಕಸನ ಎಂದು ವಿಶ್ರಾಂತ ಪ್ರಾಧ್ಯಾಪಕ, ಬೆಂಗಳೂರು ಗಾಂಧಿ ಭವನದ ಸಲಹೆಗಾರ ಪ್ರೊ.ಜಿ.ಬಿ.ಶಿವರಾಜು ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಮತ್ತು ಸೇವಕಿಯರಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದರು.
ವ್ಯಕ್ತಿತ್ವ ವಿಕಾಸವಾಗದಿದ್ದರೆ ಜೀವನದ ಉದ್ದೇಶ ಫಲಿಸದು. ಶಿಕ್ಷಣದ ನಿಜವಾದ ಅರ್ಥವನ್ನು ಎನ್‌ಎಸ್‌ಎಸ್ ಪೂರ್ಣಗೊಳಿಸುತ್ತದೆ. ಬಾಹ್ಯ ರೂಪಕ್ಕಿಂತ ಅಂತರಂಗ ಶುದ್ಧವಾಗಿರಬೇಕು.
 ಯುವಕ, ಯುವತಿಯರು ನಿಸ್ವಾರ್ಥದ ಬದುಕನ್ನು ರೂಢಿಸಿಕೊಳ್ಳಬೇಕು. ತಾವು ಪರಿಶ್ರಮಿಗಳಾಗುವ ಮೂಲಕ ತಮ್ಮ ಇತಿಮಿತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು
ಸುತ್ತೂರು ಮಠವು ಉನ್ನತವಾದ ಶಿಕ್ಷಣ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಶ್ರಮಿಸುತ್ತಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಅದು ಜೀವನವನ್ನು ರೂಪಿಸುತ್ತದೆ. 
ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ಸನ್ನು ಪಡೆಯಲು ಇದರ ಕೊಡುಗೆ ಅಪಾರ. ನಿಜವಾದ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಲು ಎನ್‌ಎಸ್‌ಎಸ್‌ನಿಂದ ಮಾತ್ರ ಸಾಧ್ಯ. ಯುವ ಪೀಳಿಗೆ ಭಾರತದ ಪರಂಪರೆಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ರೇಚಣ್ಣ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಎ.ಜಿ.ಧರ್ಮೇಶ, ಎನ್.ಅನುಷಾ ಇನ್ನಿತರರಿದ್ದರು.
ನಂತರ ಮೂರು ಗೋಷ್ಠಿಗಳು ನಡೆದವು. ಸಾಲಿಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ್ ಬೀಜಗನಹಳ್ಳಿ ಅವರು: ವ್ಯಕ್ತಿತ್ವ ವಿಕಸನ’ ಕುರಿತು, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿ.ನಂದೀಶ್ ಕುಮಾರ್ ಅವರು ’ಸೈಬರ್ ಕ್ರೈಂ ಅಪರಾಧಗಳ ತಡೆಯುವಿಕೆ’ ಕುರಿತು,  ಸರಸ್ವತಿಪುರಂ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶೇಷಾದ್ರಿ ಅವರು ’ಮಾದಕ ವಸ್ತು ಸೇವನೆ ದುಷ್ಪರಿಣಾಮಗಳು ಮತ್ತು ತಡೆಯುವಿಕೆಯ ಕ್ರಮಗಳು’ ಕುರಿತು ಉಪನ್ಯಾಸವನ್ನು ನೀಡಿದರು.