ಅಲಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಹಾಗೂ ಭೂಮಿಗಿರಿ ಪ್ರಕಾಶನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶ್ರೀಲತಾ ಮನೋಹರ್ ಅವರ ‘ಪ್ರೀತಿ ಮಾತನಾಡಲು’ ಕೃತಿ ಬಿಡುಗಡೆಗೊಳಿಸಲಾಯಿತು. ಡಾ. ನಾಗರಾಜ್ ವಿ. ಬೈರಿ, ಎನ್. ಬೆಟ್ಟೇಗೌಡ, ಕೆ. ರಘುರಾಮ್ ವಾಜಪೇಯಿ, ಡಾ. ವೈ.ಡಿ. ರಾಜಣ್ಣ, ಡಾ.ಶ್ರೀಲತಾ ಮನೋಹರ್, ಮಹಾಬಲೇಶ್ವರ ಬೈರಿ, ಡಾ. ಕೆ.ಬಿ. ಲಿಂಗರಾಜು ಇತರರು ಇದ್ದರು.
- ಕಲೆ, ಸಾಹಿತ್ಯ, ಸಂಗೀತ ಮನಸ್ಸುಗಳನ್ನು ಬೆಸೆಯುವ ಜತೆಗೆ ಸಮಾಜದಲ್ಲಿ ಸೌಹಾರ್ದ ಮೂಡಿಸಲು ನೆರವಾಗುತ್ತದೆ
- ಸಂಗೀತ, ಸಾಹಿತ್ಯ, ಕಲೆಗೆ ಯಾವುದೇ ಎಲ್ಲೆ ಇಲ್ಲ. ವಿಶ್ವದಲ್ಲೆಡೆ ಮಾನ್ಯತೆ ಇದೆ
ಮೈಸೂರು: ಸಂಗೀತ, ಸಾಹಿತ್ಯವು ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ನ ಅಂತಾರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ.ಬೈರಿ ಅಭಿಪ್ರಾಯಪಟ್ಟರು.
ಅಲಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಹಾಗೂ ಭೂಮಿಗಿರಿ ಪ್ರಕಾಶನದಿಂದ ಹೂಟಗಳ್ಳಿಯ ಶ್ರೀ ಅನಂತೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಯಿತ್ರಿ ಡಾ.ಶ್ರೀಲತಾ ಮನೋಹರ್ ಅವರ 4ನೇ ಕೃತಿ ‘ಪ್ರೀತಿ ಮಾತನಾಡಲು’ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಗೀತ, ಸಾಹಿತ್ಯ, ಕಲೆಗೆ ಯಾವುದೇ ಎಲ್ಲೆ ಇಲ್ಲ. ವಿಶ್ವದಲ್ಲಿಯೇ ಇವುಗಳಿಗೆ ತನ್ನದೇ ಅದ ಮಾನ್ಯತೆ ಇದೆ. ಕಲೆ, ಸಾಹಿತ್ಯ, ಸಂಗೀತ ಮನಸ್ಸುಗಳನ್ನು ಬೆಸೆಯುವ ಜತೆಗೆ ಸಮಾಜದಲ್ಲಿ ಸೌಹಾರ್ದ ಮೂಡಿಸಲು ನೆರವಾಗುತ್ತದೆ ಎಂದು ಹೇಳಿದರು.
ಭೂಮಿಗಿರಿ ಪ್ರಕಾಶನದ ಪ್ರಕಾಶಕರಾದ ಅಲಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಸಂಸ್ಥೆಯ ಅಧ್ಯಕ್ಷ ಎನ್.ಬೆಟ್ಟೇಗೌಡ, ಲೇಖಕಿ ಡಾ.ಶ್ರೀಲತಾ ಮನೋಹರ್ ಅವರ ಸಹಕಾರದಿಂದ ನಮ್ಮ ಪ್ರಕಾಶನದಿಂದ ಹೊರಬಂದ ಪ್ರೀತಿ ಮಾತನಾಡಲು ಪುಸ್ತಕ ಎಲ್ಲರ ಕೈ ಸೇರಿ ಜನಪ್ರಿಯಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಕೃತಿ ಕುರಿತು ಮಾತನಾಡಿ, ಕವನಗಳ ಭಾವ ತೀವ್ರತೆ ಪರಿಚಯಿಸಿದರು.
ಕವಯಿತ್ರಿ ಡಾ.ಶ್ರೀಲತಾ ಮನೋಹರ್ ಮಾತನಾಡಿ, ತಮ್ಮ ಸಾಹಿತ್ಯ ಪಯಣ ಹಾಗೂ ಕೃತಿ ರಚನೆಯ ಹಿಂದಿನ ಪ್ರೇರಣೆಯನ್ನು ಹಂಚಿಕೊಂಡರು.
ಅಲಯನ್ಸ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲಾ ಪ್ರಾಂತಪಾಲ ಮಹಾಬಲೇಶ್ವರ ಬೈರಿ, ಮೈಸೂರಿನ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು, ಮಾಜಿ ಜಿಲ್ಲಾ ಪಾಂತಪಾಲ ಡಾ.ಎಸ್.ವೆಂಕಟೇಶ್, ನಿವೃತ್ತ ಪ್ರಾಂಶುಪಾಲ ಮನೋಹರ್ ಇತರರು ಇದ್ದರು.