ಎನ್.ಆರ್.ಮೊಹಲ್ಲಾದಲ್ಲಿ ಸೆಸ್ಕ್ ವತಿಯಿಂದ ಲೈನ್‌ಮನ್ ದಿವಸ್ ಆಚರಿಸಲಾಯಿತು. ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಅನಿತಾ, ಚಾಮರಾಜನಗರ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ. ಸೋಮಶೇಖರ್ ಹಾಗೂ ಇತರರು ಇದ್ದರು.
ಮೈಸೂರು: ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಸುರಕ್ಷತೆ ಮತ್ತು ಎಚ್ಚರಿಕೆಯ ಕೆಲಸ ಅತ್ಯಂತ ಮುಖ್ಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಅನಿತಾ ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ನಗರದ ಎನ್.ಆರ್.ಮೊಹಲ್ಲಾದ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಲೈನ್‌ಮನ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ಮತ್ತು ಸಿಬ್ಬಂದಿ ನಡುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ಕೆಲಸ ನಡೆಯುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವುದೇ ಅವಘಡಗಳು ಸಂಭವಿಸದಂತೆ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿ ಸಬೇಕಿದೆ. ಆದ್ದರಿಂದ ವಿದ್ಯುತ್ ಅವಘಡಗಳನ್ನು ತಗ್ಗಿಸುವಲ್ಲಿ ಹಾಗೂ ಲೈನ್‌ಮನ್‌ಗಳ ಸುರಕ್ಷತೆಯ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದರು.
ಇದೇ ಸಂದರ್ಭ ಉತ್ತಮವಾಗಿ ಕರ್ತವ್ಯನಿರ್ವಹಿಸಿ ಗ್ರಾಹಕರುಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ ಸೆಸ್ಕ್‌ನ ವಿಶ್ವಾಸಾರ್ಹತೆ ಹೆಚ್ಚಿಸಿರುವ 18ಕ್ಕೂ ಹೆಚ್ಚು ಲೈನ್‌ಮನ್‌ಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.
ಎನ್.ಆರ್. ವಿಭಾಗೀಯ ಕಚೇರಿಯಿಂದ ಹರ್ಷ ರಸ್ತೆಯವರೆಗೆ ಪವರ್‌ಮನ್‌ಗಳು ಜಾಥಾ ನಡೆಸಿದರು. ಈ ಸಂದರ್ಭ ಚಾಮರಾಜನಗರ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ. ಸೋಮಶೇಖರ್ ಇದ್ದರು.