ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರಿನಲ್ಲಿ 4 ದಿನ ಹಗುರ ಮಳೆ ಸಾಧ್ಯತೆ

ಮೈಸೂರು:  ಜಿಲ್ಲೆಯಲ್ಲಿ ಮುಂದಿನ 4 ದಿನಗಳ ಕಾಲ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಸೆ.10 ರಿಂದ 13ರವರೆಗೆ ಜಿಲ್ಲೆಯಲ್ಲಿ 1 ರಿಂದ 3 ಮಿ.ಮೀ.ನಷ್ಟು ಹಗುರ ಮಳೆಯಾಗುವ ಸಾಧ್ಯತೆ ಇದೆ.
ಮುನ್ಸೂಚನಾ ಅವಧಿಯಲ್ಲಿ ಗರಿಷ್ಠ ತಾಪಮಾನ 32ರಿಂದ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22ರಿಂದ 23 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ನಿರೀಕ್ಷೆಯಿದೆ. ಆಕಾಶವು ಮೋಡ ಕವಿದ ವಾತಾವರಣ ಹೊಂದಿರುವ ಸಾಧ್ಯತೆಯಿದ್ದರೂ, ವ್ಯಾಪಕ ಅಥವಾ ಭಾರಿ ಮಳೆಯ ಮುನ್ಸೂಚನೆ ಇಲ್ಲ.
ರೈತರಿಗೆ ಸಲಹೆ: ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೈತರು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವಂತೆ ಕೃಷಿ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ. ಹೊದಿಕೆ (ಮಲ್ಚಿಂಗ್), ಎಡೆ ಹೊಡೆಯುವುದು ಹಾಗೂ ಸಕಾಲಿಕ ಕಳೆ ನಿರ್ವಹಣೆ ಮೂಲಕ ಮಣ್ಣಿನಲ್ಲಿರುವ ತೇವಾಂಶವನ್ನು ಸಂರಕ್ಷಿಸಬಹುದು.
ಬೆಳೆಗಳ ನಿರ್ಣಾಯಕ ಬೆಳವಣಿಗೆ ಹಂತಗಳಿಗೆ ಮಾತ್ರ ನೀರಾವರಿಗೆ ಆದ್ಯತೆ ನೀಡಬೇಕು. ಲಭ್ಯವಿರುವ ನೀರನ್ನು ಸಮರ್ಥವಾಗಿ ಬಳಸಲು ಹನಿ ನೀರಾವರಿ ಸೇರಿದಂತೆ ನೀರು ಉಳಿತಾಯದ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಜಮೀನಿನ ಬಂಡ್‌ಗಳು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಮಳೆನೀರನ್ನು ಸಂರಕ್ಷಿಸುವಂತೆಯೂ ಸಲಹೆ ನೀಡಲಾಗಿದೆ.
ಕಡಿಮೆ ಮಳೆಯ ಮುನ್ಸೂಚನೆ ಇರುವುದರಿಂದ ರೈತರು ವಾಮಾನ ಪರಿಸ್ಥಿತಿಗೆ ಅನುಗುಣವಾಗಿ ನೀರಾವರಿ ಹಾಗೂ ಕೃಷಿ ಚಟುವಟಿಕೆಗಳನ್ನು ಯೋಜಿಸುವುದು ಅಗತ್ಯ. ಬೆಳೆಗಳಲ್ಲಿ ತೇವಾಂಶದ ಕೊರತೆ, ಕೀಟಬಾಧೆ ಹಾಗೂ ರೋಗಗಳ ಬಗ್ಗೆ ನಿಯಮಿತವಾಗಿ ನಿಗಾ ವಹಿಸುವಂತೆ ಸೂಚಿಸಲಾಗಿದೆ.