ನಗರದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಸಾಗುತ್ತಿರುವ ಬೈಕ್ ಸವಾರರು.
- ಹೀಗೆ ಬಂದು ಹಾಗೆ ಹೋದ ವರುಣ
- ಕೆಲ ಹೊತ್ತಿನ ಬಳಿಕ ಮಳೆ ಸ್ತಬ್ಧ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಳೆ ಕೇವಲ 15 ನಿಮಿಷ ಕಾಲ ಸುರಿದು ಮಾಯವಾಯಿತು. ಮಧ್ಯಾಹ್ನ 2.30ರ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗಾಳಿ ಬೀಸಲು ಶುರುವಾಯಿತು. ಬಿಸಿಲಿನ ಧಗೆ ಕಡಿಮೆಯಾಗಿ ತಂಪು ಗಾಳಿ ಬೀಸಿತು.
2.45ಗಂಟೆ ಸುಮಾರಿಗೆ ಮಳೆ ಜಿನುಗಲು ಆರಂಭಿಸಿತು. ಇದು ಬಿಸಿಲಿನಿಂದ ಬಸವಳಿದು ಹೋಗಿದ್ದ ಜನರಿಗೆ ಕೊಂಚ ತಂಪೆರೆಯಿತು. ಕೆಲ ರಸ್ತೆಯಲ್ಲಿ ನೀರು ಹರಿದಾಡಿತು. ವಿಜಯನಗರ, ಜಯಲಕ್ಷ್ಮೀಪುರ ಸುಮಾರಾಗಿ ಮಳೆ ಆಗಿದ್ದು, ಚಾಮುಂಡಿಪುರಂ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ ಬಡಾವಣೆಗಳಲ್ಲಿ 45 ನಿಮಿಷ ಜಿಟಿ ಜಿಟಿ ಮಳೆ ಆಯಿತು.
ಕೆಲ ಹೊತ್ತಿನ ಬಳಿಕ ಮಳೆ ಸ್ತಬ್ಧಗೊಂಡಿತು. ಬಿಸಿಲಿನಿಂದ ಹೈರಾಣವಾಗಿ ಹೋಗಿದ್ದ ನಗರ ನಿವಾಸಿಗಳಿಗೆ ಇದರಿಂದ ನಿರಾಸೆ ಉಂಟಾಯಿತು. ದೊಡ್ಡ ಮಳೆಯ ನಿರೀಕ್ಷೆಯಲ್ಲಿದ್ದ ಜನರು, ಒಂದು ಗಂಟೆಯಾದರೂ ಮಳೆ ಸುರಿಯಲಿ ಎಂದು ಆಶಿಸಿದ್ದರು. ಆದರೆ, ಹೀಗೆ ಬಂದ ವರುಣ ಹಾಗೇ ಹೋಗಿಬಿಟ್ಟ.
ನಗರದಲ್ಲಿ ಉರಿ ಬಿಸಿಲಿನ ಧಗೆ ಹೆಚ್ಚಾಗಿದೆ. ಬೆಳಗ್ಗೆ 11ರಿಂದ ಸಂಜೆ 4 ಗಂಟೆ ಹೊರಗಡೆ ತಿರುಗಾಡಲು ಆಗದಂಥ ಪ್ರಖರತೆ ಇದೆ. ಇದರಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಸರಿಯಾಗಿ ಮಳೆ ಆಗಿಲ್ಲ. ಹೀಗಾಗಿ, ಆಕಾಶ ನೋಡುತ್ತಿರುವ ಸಾರ್ವಜನಿಕರು, ವರ್ಷ ಧಾರೆಯ ನಿರೀಕ್ಷೆಯಲ್ಲಿದ್ದರು. ಇಂದು ಸುರಿದ ಮಳೆ ಕೊಂಚ ಸಮಾಧಾನ ಉಂಟು ಮಾಡಿದ್ದು,ಮುಂದಿನ ದಿನಗಳಲ್ಲಿ ದೊಡ್ಡ ಮಳೆ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಈ ಬಾರಿ ನಿಗದಿಗಿಂತ ಮುಂಚಿತವಾಗಿಯೇ ಮುಂಗಾರು ಮಳೆ ಆಗುವ ನಿರೀಕ್ಷೆ ಇದೆ. ಅಂಡಮಾನ್ ಮತ್ತು ಕೇರಳಕ್ಕೆ ಮುಂಗಾರು ಮಾರುತಗಳು ಸಾಮಾನ್ಯಕ್ಕಿಂತ ಬೇಗನೇ ಆಗಮಿಸಲಿವೆ. ನೈರುತ್ಯ ಮುಂಗಾರು ಮಳೆಯು ಮೇ16 ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಚಿತವಾಗಿ ಪ್ರವೇಶಿಸಲಿದೆ. ಮೇ ಕೊನೆಯ ವಾರದಲ್ಲೇ ಕೇರಳಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಬಳಿಕ ರಾಜ್ಯವನ್ನು ಮಂಗಾರು ಮಳೆ ಪ್ರವೇಶಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ.