ಮಹಿಳೆ ಕೊಲೆ ಪ್ರಕರಣದ ಅಪರಾಧಿಗೆ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಿ.ನರಸೀಪುರ: ಮಹಿಳೆ ಕೊಲೆ ಪ್ರಕರಣದ ಅಪರಾಧಿಗೆ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲೂಕಿನ ಮೂಗೂರು ಗ್ರಾಮದ ಮಹೇಶ್‌ಕುಮಾರ ಎಂಬಾತ ಅದೇ ಗ್ರಾಮದ ಭಾಗ್ಯಲಕ್ಷ್ಮೀ ಎಂಬುವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ರೂ. ದಂಡ ವಿಧಿಸಲಾಗಿದೆ. ಭಾಗ್ಯಲಕ್ಷ್ಮೀಯ ಮಗಳು ಪೂಜಾಶ್ರೀ ಹಾಗೂ ಮಹೇಶ್ ಕುಮಾರ ಪ್ರೀತಿಸುತ್ತಿದ್ದರು. ಈ ವಿಚಾರ ಮೃತ ಭಾಗ್ಯಲಕ್ಷ್ಮೀಗೆ ತಿಳಿದು ಮಹೇಶ್ ಕಂಡಾಗಲೆಲ್ಲ ನಿಂದಿಸುತ್ತಿದ್ದರು. 2021ರ ಆ.25 ರಂದು ಸಂಜೆ 6.20ರಲ್ಲಿ ಭಾಗ್ಯಲಕ್ಷ್ಮೀ ಚಾಮರಾಜ ಬಲದಂಡೆ ನಾಲೆಯ ಕಚ್ಚಾ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮಹೇಶ್ ಕುಮಾರ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಗೋಣಿ ಚೀಲಕ್ಕೆ ಶವವನ್ನು ಹಾಕಿ ನಾಲೆಯ ನೀರು ಬರುವ ಪೈಪಿನೊಳಗೆ ಹಾಕಿ ಸಾಕ್ಷಿ ನಾಶಪಡಿಸಿರುವುದು ತನಿಖೆಯಿಂದ ದೃಢಪಟ್ಟಿತ್ತು.
ಅಂದಿನ ತನಿಖಾಧಿಕಾರಿಯಾದ ಪೊಲೀಸ್ ವೃತ್ತ ನಿರೀಕ್ಷಕ ಎನ್.ಜಿ.ಕೃಷ್ಣಪ್ಪ ಅವರು ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲನಗೌಡ ಅವರು ಮೇ 13ರಂದು ಶಿಕ್ಷೆ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಸದರಿ ಪ್ರಕರಣದಲ್ಲಿ ಬಿ.ಎಂ.ವೀಣಾ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.