ತೀರ್ಪು 
ಮೈಸೂರು

ಪತ್ನಿ ಹತ್ಯೆಗೈದಿದ್ದವನಿಗೆ ಜೀವಾವಧಿ ಶಿಕ್ಷೆ

ಪ್ರಮುಖ ಮುಖ್ಯಾಂಶಗಳು

  • ಮಮತಾಳ ಬಗ್ಗೆ ಸಂಶಯಿಸಿ ಆಗಾಗ್ಗೆ ಗಲಾಟೆ ನಡೆಸುತ್ತಿದ್ದ ಆಪರಾಧಿ
  • ಇಲವಾಲ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆ

ಮೈಸೂರು:

ಆರು ವರ್ಷಗಳ ಹಿಂದೆ ಪತ್ನಿಯನ್ನು ಮಚ್ಚಿನಿಂದ ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೈಸೂರು ತಾಲೂಕು ಹೊಸಕಾಮನಕೊಪ್ಪಲು ಗ್ರಾಮದ ನಾಗೇಶ ಶಿಕ್ಷೆಗೆ ಗುರಿಯಾದ ಅಪರಾಧಿ.
ನಾಗೇಶನ ಮೊದಲ ಪತ್ನಿ ರಾಜೇಶ್ವರಿ ನಿಧನವಾದ ಬಳಿಕ ಮಮತಾ ಎಂಬುವವರನ್ನು ಎರಡನೇ ವಿವಾಹ ಆಗಿದ್ದ. ಆದರೆ ಮಮತಾಳ ಬಗ್ಗೆ ಸಂಶಯಿಸಿ ಆಗಾಗ್ಗೆ ಗಲಾಟೆ ನಡೆಸುತ್ತಿದ್ದ. ಹಿರಿಯರು ಬುದ್ಧಿವಾದ ಹೇಳುತ್ತಿದ್ದರು.
ಆದರೂ 2020ರ ಮಾ.6ರಂದು ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಮಮತಾ ಮನೆ ಮುಂದೆ ಕೊಟ್ಟಿಗೆ ಸ್ವಚ್ಛಗೊಳಿಸುವಾಗ ಜಗಳ ತೆಗೆದು ಅವಾಚ್ಯ ಶಬ್ದದಿಂದ ನಿಂದಿಸಿ, ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಬಗ್ಗೆ ಇಲವಾಲ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಡಗಂಡಿ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ಮೃತಳ ಪುತ್ರನಿಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.