ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಲಾ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಸ್ಟೆಲ್ ವಿದ್ಯಾರ್ಥಿಗಳು.
- ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅಭಿಪ್ರಾಯ
- ಸಂಗೀತ, ನಾಟಕ, ಕ್ರೀಡೆಗಳಿಗೆ ಯಾವುದೇ ಜಾತಿ-ಭೇದ ಇಲ್ಲ.
- ಕಲೆಯನ್ನು ಓದುವ ಜತೆಯಲ್ಲಿ ಕಲೆಯನ್ನು ಮೈಗೂಡಿಸಿಕೊಳ್ಳಬೇಕು.
ಮೈಸೂರು: ಕಲೆ ಎಲ್ಲರಿಗೂ ಒಲಿದು ಬರೋದಿಲ್ಲ, ಕೆಲವರಿಗೆ ಮಾತ್ರ ಒಲಿದು ಬರುತ್ತದೆ. ಕಲೆ ಮತ್ತು ಸಂಸ್ಕೃತಿ ಮೈಗೂಡಿಸಿಕೊಂಡರೆ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಲಾ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ, ನಾಟಕ, ಕ್ರೀಡೆಗಳಿಗೆ ಯಾವುದೇ ಜಾತಿ-ಭೇದ ಇಲ್ಲ. ಧರ್ಮಾತೀತವಾಗಿ ಎಲ್ಲವನ್ನೂ ಮೀರಿ ಬೆಳೆದು ಬಂದಿರುವಂತಹದ್ದು. ಈ ಕಲೆಯನ್ನು ಓದುವ ಜತೆಯಲ್ಲಿ ಕಲೆಯನ್ನು ಮೈಗೂಡಿಸಿಕೊಳ್ಳಬೇಕು.
ಬಾಲ್ಯದಿಂದ ಪ್ರೌಢಾವಸ್ಥೆಗೆ ಬರುವ ಮಕ್ಕಳು ಮನಸ್ಸನ್ನು ಬೇರೆ ಕಡೆ ಚಂಚಲಗೊಳಿಸದೆ ಓದಿನ ಕಡೆ ಕೇಂದ್ರೀಕರಿಸಬೇಕು. ಯಾವುದೇ ಆಕರ್ಷಣೆಗೆ ಒಳಗಾಗಬೇಡಿ. ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಯೊಂದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಹೇಳಿದರು.
ತರಬೇತುದಾರ ದೇವಾನಂದ ವರಪ್ರಸಾದ್ ಮಾತನಾಡಿ, ಜಾನಪದ ಕಲೆಯು ಒಬ್ಬರಿಂದ ಒಬ್ಬರು ಕೇಳಿ ಹಾಡುವುದರ ಮೂಲಕ ಬೆಳೆದು ಬಂದಿದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ತರಬೇತಿ ನೀಡಲು ಇಲಾಖೆಗಳು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಸಿಕ್ಕರೆ ಮುಂದೆ ಬೆಳೆಯುತ್ತಾರೆ. ಕಲಾ ತರಬೇತಿಯಂತಹ ಕಾರ್ಯಕ್ರಮ ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಹಾಯವಾಗಲಿದೆ, ಕಲೆ ಕಲಿತಾಗ ತನ್ನಲ್ಲಿನ ಚೈತನ್ಯ ಹೊರ ಬರುತ್ತದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ನಿಲಯ ಪಾಲಕ ಕೆ.ಎಸ್.ಮೋಹನಕುಮಾರಿ ಉಪಸ್ಥಿತರಿದ್ದರು.