ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಂಡ್ಯ ರಮೇಶ್, ಡಾ.ವಸುಂಧರಾ ದೊರೆಸ್ವಾಮಿ, ಬಿ.ಸುರೇಶ್, ಸುಕನ್ಯಾ ಪ್ರಭಾಕರ್, ರಾಜಪ್ಪ ಕಿರಗಸೂರು, ಡಾ.ನಾಗೇಶ್ ವಿ.ಬೆಟ್ಟಕೋಟೆ ಇದ್ದರು. 
ಮೈಸೂರು

ಕನ್ನಡ ಸಾಧಕರನ್ನು ಗೌರವಿಸುವ ಕೆಲಸವಾಗಲಿ

ಅವಿನಾಶ್ ಜೈನಹಳ್ಳಿ
ಮೈಸೂರು: ಕನ್ನಡ ಉಳಿಗೆ ಶ್ರಮಿಸುತ್ತಿರುವ ಸಾಧಕರನ್ನು ಎಡ, ಬಲಗಳ ಪೂರ್ವಗ್ರಹವಿಲ್ಲದೆ ಆಯ್ಕೆ ಮಾಡಿ ಗೌರವಿಸಬೇಕು ಎಂದು ಮಂಡ್ಯ ರಮೇಶ್ ಹೇಳಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ಬುಧವಾರ ವಿವಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಉಸಿರಾಯಿತು ಕನ್ನಡ, ಬದುಕಾಗಲಿ ಕನ್ನಡ 69 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಪರಿಪೂರ್ಣ ವ್ಯಕ್ತಿತ್ವವನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ರಂಗಭೂಮಿಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಉಳಿವಿಗೆ ರಂಗಭೂಮಿಯೇ ಶ್ರೇಷ್ಠ ಮಾಧ್ಯಮ. ಮಮ್ಮಿ ಡ್ಯಾಡಿಯಿಂದ ಕನ್ನಡ ಧ್ವಂಸ ಶುರುವಾಯಿತು. ಹಾಗಾಗಿ ಇಂಗ್ಲಿಷ್, ತಮಿಳು ಸೇರಿ ಎಲ್ಲ ಭಾಷೆಯನ್ನು ಕಲಿಯಿರಿ ಕನ್ನಡದಲ್ಲಿ ಬದುಕಿರಿ. ಕನ್ನಡದಲ್ಲಿ ಆಹ್ವಾನ ಪತ್ರಿಕೆ ಹೊರಡಿಸಿ, ಮಕ್ಕಳಿಗೆ ನೆಲದ ಸೊಗಡು ಕಲಿಸಿ, ಆಡಳಿತ ಕನ್ನಡದಲ್ಲಿರಬೇಕು. ಇಲ್ಲವಾದರೆ ಕನ್ನಡ ಕೇವಲ ಘೋಷಣೆಯಾಗಿ ಉಳಿಯಲಿದೆ ಎಂದರು.
ನಟರು, ಕಲಾವಿದರು ಭಾಷೆಯ ರೂವಾರಿಯಾಗಿದ್ದು ಹಿಂದಿನ ಚಲನಚಿತ್ರಗಳಲ್ಲಿನ ಕನ್ನಡ ಮುದ ನೀಡುತ್ತದೆ. ರಂಗಭೂಮಿಯಲ್ಲಿರುವುದು ಶ್ರೇಷ್ಠ ಕನ್ನಡವಾಗಿದೆ. ಆದರೆ ಇತ್ತೀಚೆಗೆ ಕನ್ನಡ ಭಾಷೆಯ ಬಳಕೆ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಬೇಸರಿಸಿದರು.
ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ, ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ಕಲಾವಿದೆ ಸುಕನ್ಯಾ
ಪ್ರಭಾಕರ್, ಗಾಯಕ ರಾಜಪ್ಪ ಕಿರಗಸೂರು ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಗಣ್ಯರು ಕಲಾವಾಹಿನಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು. ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಇತರರಿದ್ದರು.