ಹುಣಸೂರು ನಗರದ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಟಿಎಚ್‌ಒ ಜಿ.ಗಿರಿದಾಸ್ ಉದ್ಘಾಟಿಸಿದರು. ಟಿಎಚ್‌ಇ ರಾಜೇಶ್ವರಿ, ಪ್ರಾಂಶುಪಾಲೆ ಸಮೀನಾ, ಮುಷೀದ್, ರಮೇಶ್ ಇತರರಿದ್ದಾರೆ. ಹುಣಸೂರು
ಮೈಸೂರು

ಯುವಜನರಲ್ಲಿ ಅಂಗಾಂಗ ದಾನದ ಅರಿವು ಮೂಡಲಿ

ಟಿಎಚ್‌ಒ ಡಾ.ಜಿ.ಗಿರಿದಾಸ್ ಅಭಿಪ್ರಾಯ

ಹುಣಸೂರು: ಅಂಗಾಂಗ ದಾನವು ಮಾನವೀಯತೆ ಮತ್ತು ಸೇವೆಯ ಮಹತ್ವದ ಕಾರ್ಯವಾಗಿದೆ. ಮರಣ ನಂತರವೂ ವ್ಯಕ್ತಿ ಬದುಕಿರುತ್ತಾನೆ ಎಂದರೆ ಅಂಗಾಂಗ ದಾನದಿಂದ ಮಾತ್ರ ಸಾಧ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಗಿರಿದಾಸ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಕಾಲೇಜಿನಲ್ಲಿ ಬುಧವಾರ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಜೀವ ಸಾರ್ಥಕತೆ-ಸೊಟ್ಟೋ ಕರ್ನಾಟಕ ಕಾರ್ಯಕ್ರಮದಡಿ ಆಯೋಜಿಸಿದ್ದ ಅಂಗಾಂಗ ದಾನ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಗಾಂಗ ದಾನ ಮಾಡುವ ನಿರ್ಧಾರದ ವೇಳೆ ಕುಟುಂಬಸ್ಥರ ಒಪ್ಪಿಗೆ ಅಥವಾ ವಿರೋಧ ಸಹಜವಾಗಿಯೇ ಇರುತ್ತದೆ. ಇದಕ್ಕೆ ಅವರೊಂದಿಗಿನ ಭಾವನಾತ್ಮಕ ಸಂಬಂಧಗಳು ಕಾರಣವಾಗುತ್ತವೆ. ಜತೆಗೆ ಮೃತದೇಹದ ಆತ್ಮವನ್ನು ದೇವರು ಸ್ವರ್ಗಕ್ಕೆ ಸ್ವೀಕರಿಸುವುದಿಲ್ಲ ಎನ್ನುವ ಕೆಲುವು ಧಾರ್ಮಿಕ ನಂಬಿಕೆಗಳು ಅಡ್ಡಿಯಾಗಬಹುದು. ಅಂಗಾಂಗಗಳ ದುರುಪಯೋಗ ಆಗಬಹುದೆನ್ನುವ ಅನುಮಾನವೂ ಕಾಡುತ್ತದೆ. ಆದರೆ ಮೃತ ವ್ಯಕ್ತಿಯೊಬ್ಬನ ಅಂಗಾಂಗ ದಾನ ಮತ್ತೊಬ್ಬ ವ್ಯಕ್ತಿಗೆ ಹೊಸ ಬದುಕು ನೀಡುವ ಕೆಲಸವಾಗಿದೆ ಎಂದರು.

ಮಾನವೀಯತೆಯ ನೆಲೆಗಟ್ಟಿನಲ್ಲಿ ನಾವೆಲ್ಲರೂ ಆರೋಗ್ಯಪೂರ್ಣ ಅಂಗಾಂಗಗಳನ್ನು ದಾನ ಮಾಡುವ ನಿಟ್ಟಿನಲ್ಲಿ ಆಲೋಚನೆ ನಡೆಸಬೇಕಿದೆ. ಯುವಜನರು ಈ ನಿಟ್ಟಿನಲ್ಲಿ ಹೆಚ್ಚು ಜಾಗೃತರಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಂಗಾಂಗ ದಾನ ಪ್ರತಿಜ್ಞೆ ಕೈಗೊಂಡರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸಮೀನಾ, ಕಿರಿಯ ತರಬೇತಿ ಅಧಿಕಾರಿಗಳಾದ ಮುಷೀದ್, ರಮೇಶ್, ಟಿಎಚ್‌ಒ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಗೌಡ, ರವಿ ಇತರರು ಇದ್ದರು.