ಕೆ.ಆರ್.ನಗರದ ಹೊರ ವಲಯದ ಕಾಳೇನಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಪಿ.ಜಗದೀಶ್ ಚಾಲನೆ ನೀಡಿದರು. ರಶ್ಮಿ ಮಂಜುನಾಥ್, ಕವಿತಾ, ಲೋಕೇಶ್, ಸೌಮ್ಯಾ ಗೌರೀಶ್, ತಾರಾ, ವೀಣಾ, ಅಂಬಿಕಾ, ದೀಪ್ತಿ, ದೇವಿಕಾರಾಣಿ, ಸುಮಾ, ಜಯಶಂಕರ್, ಪುಷ್ಪಾಲತಾ ಇದ್ದರು. 
ಮೈಸೂರು

ಮನೆ ಸುತ್ತಮುತ್ತ ಗಿಡ ಬೆಳೆಸುವ ಪ್ರವೃತ್ತಿ ಹೆಚ್ಚಲಿ

ಕೆ.ಆರ್.ನಗರ : ಪರಿಸರ ಉತ್ತಮವಾಗಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮನೆ ಸುತ್ತಮುತ್ತ ಗಿಡ ಬೆಳೆಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕೆಂದು ಪಿಎಂಶ್ರೀ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಕೆ.ಪಿ.ಜಗದೀಶ್ ಹೇಳಿದರು.
ಪಟ್ಟಣದ ಹೊರವಲಯದ ಕಾಳೇನಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯ ಆವರಣದಲ್ಲಿ ಇತ್ತೀಚೆಗೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್ ಅವಲಂಬನೆ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದ್ದು, ಮನೆ ಮತ್ತು ಶಾಲೆ, ಕಚೇರಿಗಳಲ್ಲಿ ಪ್ಲಾಷ್ಟಿಕ್ ಬಳಕೆಯನ್ನು ತಪ್ಪಿಸಬೇಕು ಎಂದರು.
ನಗರಗಳ ಆಧುನೀಕರಣ, ಕೈಗಾರೀಕರಣ ಮತ್ತು ಜನಸಂಖ್ಯೆ ಬೆಳೆದಂತೆಲ್ಲ ಪರಿಸರ ನಾಶ ಆಗುತ್ತಿದ್ದು, ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಮೇಲಿದೆ. ಭೂಮಿಯ 3ನೇ 2 ಭಾಗದಷ್ಟು ಪರಿಸರ ಇರಬೇಕು. ಇದಕ್ಕಾಗಿ ನಾವೆಲ್ಲರೂ ಗಿಡ ಬೆಳೆಸಿ ಸಮತೊಲನ ಕಾಪಾಡಲು ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಪ್ರಭಾರ ಮುಖ್ಯಶಿಕ್ಷಕಿ ರಶ್ಮಿ ಮಂಜುನಾಥ್ ಮಾತನಾಡಿ, ಮಾನವ ಹಾಗೂ ಪ್ರಾಣಿಪಕ್ಷಿಗಳ ಉಳಿವಿಗಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ. ಅದಕ್ಕಾಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಗಿಡ ಬೆಳೆಸಿ ಪ್ರಕೃತಿ ಕಾಪಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಶಿಕ್ಷಕರಾದ ಕವಿತಾ, ಲೋಕೇಶ್, ಸೌಮ್ಯಾ ಗೌರೀಶ್, ತಾರಾ, ವೀಣಾ. ಅಂಬಿಕಾ, ದೀಪ್ತಿ, ದೇವಿಕಾರಾಣಿ, ಸುಮಾ, ಜಯಶಂಕರ್, ಪುಷ್ಪಾಲತಾ ಇತರರು ಹಾಜರಿದ್ದರು.