ಅದಮ್ಯ ರಂಗಶಾಲೆಯ ವತಿಯಿಂದ ವಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕಿ ಯಶೋಧಾ ರಾಮಕೃಷ್ಣ, ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಇಂಜಿನಿಯರ್ ರಾಮಕೃಷ್ಣ, ಯುವಕವಿ ಜಿ. ರವೀಂದ್ರ ಕುಮಾರ್ ಉಪಸ್ಥಿತರಿದ್ದರು.
ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗೆ ಮಕ್ಕಳು ಮೊಬೈಲ್ ಹೆಚ್ಚು ಬಳಸಿದರೆ, ಅದು ಗೀಳಾಗಿ ಬದುಕು ಹಾಳಾಗುತ್ತದೆ. ಆದ್ದರಿಂದ ಮಕ್ಕಳು ಮೊಬೈಲ್ ಸಹವಾಸ ತೊರೆದು ಪುಸ್ತಕ ಓದುವ ಸಂಸ್ಕೃತಿಯ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಲೇಖಕಿ ಯಶೋಧಾ ರಾಮಕೃಷ್ಣ ಕರೆ ನೀಡಿದರು.
ಅದಮ್ಯ ರಂಗಶಾಲೆಯ ವತಿಯಿಂದ ನಗರದ ವಿಜಯನಗರದ ಮೂರನೇ ಹಂತದಲ್ಲಿರುವ ವಿ.ಕೆ. ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ಪುಸ್ತಕ ದಿನ’ ಸಮಾರಂಭದಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಮೊಬೈಲಿನಿಂದ ಮಕ್ಕಳು ದೂರವಿದ್ದಷ್ಟು ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯವಾಗುತ್ತದೆ. ಹೀಗೆ ಉಳಿದ ಸಮಯವನ್ನು ಪುಸ್ತಕ ಓದಲು, ಆಟ ಆಡಲು, ಸ್ನೇಹಿತರ ಜತೆ ಬೆರೆಯಲು ಬಳಸಬಹುದು. ಆದ್ದರಿಂದ, ಪುಸ್ತಕಂ ಹಸ್ತಂ ಭೂಷಣಂ ಎಂಬಂತೆ ಮಕ್ಕಳು ಕೈಯಲ್ಲಿ ಪುಸ್ತಕ ಹಿಡಿಯಬೇಕು ಎಂದರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಶ್ರೀಮಂತವಾಗಿದೆ. ಅನೇಕರು ಮಕ್ಕಳಿಗಾಗಿ ಕವಿಗಳು, ಕತೆ, ಕಾವ್ಯ, ನಾಟಕ, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಂತಹ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಅದರಲ್ಲಿನ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ ಎಂದರು.
ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಇಂಜಿನಿಯರ್ ರಾಮಕೃಷ್ಣ, ಯುವ ಕವಿ ಜಿ. ರವೀಂದ್ರ ಕುಮಾರ್, ರಂಗಕರ್ಮಿಗಳಾದ ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಸದಭಿರುಚಿ ಓದನ್ನು ಪ್ರೇರೇಪಿಸುವ ಸಾಹಿತ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.