ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು. ಎಂ.ಎಸ್.ಕೆ. ನರಹರಿ ಬಾಬು, ಎಂ.ಡಿ. ಗೋಪಿನಾಥ, ಎಸ್.ಬಾಲಾಜಿ, ವೈ.ಆರ್. ರಮೇಶ್, ಇಂದುಮತಿ ಇತರರು ಇದ್ದರು. 
ಮೈಸೂರು

ಭವಿಷ್ಯದ ಓದಿನ ಆಯ್ಕೆ ಬದುಕಿಗೆ ಪೂರಕವಾಗಿರಲಿ: ಪ್ರೊ.ಎಂ.ಎಸ್.ಕೆ. ನರಹರಿ ಬಾಬು ಸಲಹೆ

ಪ್ರಮುಖ ಮುಖ್ಯಾಂಶಗಳು

  • ಕಾಲದ ಪ್ರಗತಿಗೆ ಅನುಗುಣವಾದ ಓದನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ
  • ತಿಳಿದವರ ಸೂಕ್ತ ಮಾರ್ಗದರ್ಶನದಲ್ಲಿ ಹೊಸ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ
ಮೈಸೂರು:ಇಂದಿನ ದಿನಗಳಲ್ಲಿ ಕೆಲಸ ಎಂಬುದು ಅನಿರ್ದಿಷ್ಟವಾಗುತ್ತಿದ್ದು, ಭವಿಷ್ಯದ ಓದಿನ ಆಯ್ಕೆ ನಮ್ಮ ಬದುಕಿನ ಮುಂದಿನ ದಿನಗಳಿಗೆ ಪೂರಕವಾಗಿರಬೇಕು ಎಂದು ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಎಂ.ಎಸ್.ಕೆ. ನರಹರಿಬಾಬು ಹೇಳಿದರು.
ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಕಾಲೇಜಿನ ಸಂಪ್ರಭಾ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲದ ಪ್ರಗತಿಗೆ ಅನುಗುಣವಾದ ಓದನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಇಂಜಿನಿಯರಿಂಗ್, ಬಯೋಮೆಡಿಕಲ್ ಇಂಜಿನಿಯರಿಂಗ್‌ನಂತಹ ಹೊಸ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇಂತಹ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಲು ತಿಳಿದವರ ಸೂಕ್ತ ಮಾರ್ಗದರ್ಶನವನ್ನು ಪಡೆದು ಮುಂದುವರಿಯಬೇಕು ಎಂದು ಸಲಹೆ ನೀಡದರು.
ಕಾಲೇಜಿನ ಸಾಹಿತ್ಯಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿವರ್ಷದಂತೆ ಈ ವರ್ಷವೂ ‘ಸಂಪ್ರಭಾ’ ವಾರ್ಷಿಕ ಸಂಚಿಕೆ ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ಗೋಪಿನಾಥ ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಅನುಭವವು ಅಕ್ಷರದ ರೂಪದಲ್ಲಿ ಹೊರಬಂದ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳಿಗೆ ಸಂಬಂಧಿಸಿದ ಹಲವಾರು ಲೇಖನಗಳು ಹಾಗೂ ಕಾಲೇಜಿನ ಪ್ರತಿಯೊಂದು ಕಾರ್ಯಕ್ರಮದ ವರ್ಣರಂಜಿತ ಪುಟಗಳು ಅತ್ಯಂತ ಮೌಲಿಕವಾಗಿ ಮೂಡಿಬಂದು ತೂಕದ ಹೊತ್ತಗೆಯಾಗಿದೆ ಎಂದರು.
ಸಂಸ್ಥೆಯು ಪ್ರತಿ ವರ್ಷವೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪರಂಪರೆಯನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಈ ಬಾರಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ 305 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಗಳಿಸಿರುವುದು ನಮ್ಮ ಹೆಮ್ಮೆಯಾಗಿದೆ. ಈ ಸಾಧನೆಗೆ ವಿದ್ಯಾರ್ಥಿಗಳೊಂದಿಗೆ ಅವರನ್ನು ತಯಾರು ಮಾಡಿದ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಪ್ರಾಮಾಣಿಕ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ಸಂಸ್ಥೆ ಉಪಾಧ್ಯಕ್ಷ ಎಸ್.ಬಾಲಾಜಿ ಮಾತನಾಡಿ, ನಿಮ್ಮ ಯಶಸ್ಸು ನಿಮ್ಮದು ಮಾತ್ರವಲ್ಲ ನಿಮ್ಮ ಹಿಂದೆ ಇರುವ ಪಾಲಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯದೂ ಆಗಿದೆ. ಸಾಧನೆ ಸಂತೋಷ ತಂದಿದೆ ಆದರೆ ಸಂತೃಪ್ತಿ ತರಬೇಕಿದೆ, ನಿಮ್ಮ ಗುರಿಯನ್ನು ಎತ್ತರಿಸಿಕೊಂಡು ಅಮೋಘವಾದದ್ದನ್ನು ಸಾಧಿಸಲು ಬೇಕಾದ ಪೂರಕ ತಯಾರಿಗಳನ್ನು ಮಾಡಬೇಡಿ ಎಂದರು.
ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ತಮ್ಮ ಸಾಧನೆಯ ಹಿಂದೆ ಪಾಲಕರ ತ್ಯಾಗ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಸದ್ವಿದ್ಯಾ ಕಾಲೇಜಿನ ಗುಣಮಟ್ಟದ ಶಿಕ್ಷಣವೇ ಪ್ರಮುಖ ಕಾರಣವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಪುರಸ್ಕೃತ ವಿದ್ಯಾರ್ಥಿಗಳಾದ ಕೆ. ಚಿತ್ರಾಸ್ಪೂರ್ತಿ ಮತ್ತು ಎನ್.ರಿಶಿತ್‌ಗೌಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಾಂಶುಪಾಲ ವೈ.ಆರ್. ರಮೇಶ್, ಉಪ ಪ್ರಾಂಶುಪಾಲೆ ಇಂದುಮತಿ, ಉಪನ್ಯಾಸಕರಾದ ಡಾ. ಮಂಜುನಾಥ್‌ಭಟ್, ಗಾಯತ್ರಿ, ಶೈಲಜಾ ಇತರರು ಇದ್ದರು.