ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಗೋಡೆಬರಹಗಳ ಪ್ರದರ್ಶನವನ್ನು ಪೌರಾಯುಕ್ತೆ ಕೆ.ಮಾನಸಾ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ.ಮಂಜು, ಪ್ರತಿಭಾ ಜೆನ್ನಿಫರ್, ಶಿವಣ್ಣ, ಆನಂದ್ ಇತರರಿದ್ದಾರೆ.
ಹುಣಸೂರು : ಮಹಿಳೆಯರು ಶಿಕ್ಷಣದ ಶಕ್ತಿಯೊಂದಿಗೆ ಸಾಧಿಸುವ ಇಚ್ಛಾಶಕ್ತಿ ಮತ್ತು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ಸಾಧನೆಯ ಶಿಖರವೇರಲು ಸಾಧ್ಯ ಎಂದು ನಗರಸಭೆ ಪೌರಾಯುಕ್ತೆ ಕೆ.ಮಾನಸಾ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ಮೊಟ್ಟಮೊದಲು ತಾನು ಮಹಿಳೆ ಎನ್ನುವ ಹೆಮ್ಮೆ ಇರಬೇಕು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ನಿಜಜೀವನಕ್ಕೆ ಕಾಲಿಟ್ಟಾಗ ಸ್ವಾವಲಂಬಿಯಾಗಿ ಬದುಕಲು ಮಾನಸಿಕಸ್ಥೈರ್ಯ ಅಗತ್ಯ. ಸಾಧಿಸುವ ಛಲ ನಿಮ್ಮಲ್ಲಿ ಇರಬೇಕು. ಇದರ ಜತೆಗೆ ಶಿಕ್ಷಿತರಾಗಿದ್ದಲ್ಲಿ ಸಾಧನೆ ಸಾಧ್ಯ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಮಂಜು ಮಾತನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ಆರ್.ಬಸವಲಿಂಗಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥ ರಾಜಶೇಖರನ್, ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಪ್ರಸನ್ನ, ಪ್ರತಿಭಾ ಜೆನ್ನಿಫರ್, ಸಿಡಿಸಿ ಸದಸ್ಯರಾದ ಆನಂದ್, ಹನಗೋಡು ನಟರಾಜ, ಸುಮನಾ, ಶಿವಣ್ಣ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು. ವಿದ್ಯಾರ್ಥಿನಿಯರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಇದೇ ವೇಳೆ ಮಹಿಳಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ರಚಿಸಿದ್ದ ಪೋಸ್ಟರ್‌ಗಳು, ಗೋಡೆಬರಹಗಳ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು.