ನಗರದ ತಾಲೂಕು ಕಚೇರಿ ಸುಭಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಿವಕುಮಾರ್ ಕಾಸನೂರು, ಬಾಲಾಜಿ, ವಸಂತ್ ಕುಮಾರ್ ಸೇರಿದಂತೆ ಇತರರು ಇದ್ದರು. 
ಮೈಸೂರು

ಶರಣರ ಇತಿಹಾಸ, ವಚನಗಳ ಅಧ್ಯಯನವಾಗಲಿ

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಬಸವ ಸೇನೆ ಅಧ್ಯಕ್ಷ ಬಸವ ಯೋಗಿ ಅಭಿಮತ
ನಂಜನಗೂಡು : 12ನೇ ಶತಮಾನ ಬಹಳ ಪ್ರಸಿದ್ಧಿ ಪಡೆದಿರುವ ಶತಮಾನವಾಗಿದೆ. ಹಲವಾರು ಶರಣರು, ವಚನ ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಶರಣರ ಇತಿಹಾಸ ಹಾಗೂ ವಚನಗಳನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ವಿಶ್ವ ಬಸವ ಸೇನೆ ಅಧ್ಯಕ್ಷ ಬಸವ ಯೋಗಿ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಸಮಾಜದ ಸಂಘಟನೆ ವತಿಯಿಂದ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಸಿದ್ದರಾಮೇಶ್ವರರು 1840 ವಚನಗಳನ್ನು ರಚನೆ ಮಾಡಿದ್ದರು. ಆದರೆ ವಚನಗಳು ಸರಿಯಾಗಿ ಸಿಗಲಿಲ್ಲ. ಇತ್ತೀಚೆಗೆ 23,000 ವಚನಗಳು ಸಿಕ್ಕಿದ್ದು ಇದರಲ್ಲಿ ಸಿದ್ದರಾಮೇಶ್ವರರದ್ದು ಸಿಂಹ ಪಾಲಾಗಿದೆ. ಮೂಲತಃ ಮರಾಠಿಗರಾಗಿದ್ದರು ಕೂಡ ಕನ್ನಡದಲ್ಲಿ ವಚನಗಳನ್ನು ರಚನೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಶರಣರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು ಎಂದರು.
ಬಳಿಕ ತಾಲೂಕು ದಂಡಾಧಿಕಾರಿ ಶಿವಕುಮಾರ್ ಹಾಸನೂರು ಮಾತನಾಡಿ, 12ನೇ ಶತಮಾನದಲ್ಲಿ ಹಲವಾರು ವಚನಕಾರರು ಹಾಗೂ ಸಂತ ಶ್ರೇಷ್ಠರು ಹುಟ್ಟಿಕೊಂಡಿರುವ ಕಾಲವಾಗಿದೆ. ಪ್ರಸ್ತುತ 21ನೇ ಶತಮಾನದಲ್ಲಿ ವಚನಗಳಿಗೆ ಮಹತ್ವ ಬಂದಿದೆ. ಶರಣರ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜಯಂತಿಗಳಿಗೆ ಮಹತ್ವ ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಭೋವಿ ಸಂಘದ ಅಧ್ಯಕ್ಷ ಬಾಲಾಜಿ, ಗೌರವಾಧ್ಯಕ್ಷ ಮಹಾದೇವ, ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಲಕ್ಷ್ಮಣ ಭೋವಿ, ಹರೀಶ್ ಕುಮಾರ್, ಕಾಳಪ್ಪ, ಶಿವರಾಜು, ಪಾಪಣ್ಣ ಮಣಿಕಂಠ ಸ್ವಾಮಿ ನರಸಿಂಹ ಉಮೇಶ್ ಲಿಂಗರಾಜು ತಿಮ್ಮರಸು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.