ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪ್ರಸಾದ್ ಅವರು ರಚಿಸಿರುವ ಜಿಎಸ್‌ಟಿ ಕುರಿತಾದ ಕೃತಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಆಡಳಿತ) ಎಂ.ಬಾಲಸುಬ್ರಹ್ಮಣ್ಯ ಬಿಡುಗಡೆಗೊಳಿಸಿದರು. ಸತ್ಪಾಲ್ ಪುಲನಿ, ವಿನಾಯಕ್ ಪುಲನಿ, ವಿಷ್ಣುತೀರ್ಥ ಜಮಖಂಡಿ, ಬಿ.ಎಸ್.ವೆಂಕಟರಾಮು, ಎಸ್.ಪ್ರಸಾದ್ ಇನ್ನಿತರರಿದ್ದರು.
- ವಾಣಿಜ್ಯ ತೆರಿಗೆ ಇಲಾಖೆಯ ಎಂ.ಬಾಲಸುಬ್ರಹ್ಮಣ್ಯ ಅನಿಸಿಕೆ
- ಎಸ್. ಪ್ರಸಾದ್ ಅವರ ಕೃತಿ ಬಿಡುಗಡೆ
ಮೈಸೂರು: ‘ಒಂದು ದೇಶ, ಒಂದು ತೆರಿಗೆ’ ಎಂಬ ಪರಿಕಲ್ಪನೆಯಡಿ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಕುರಿತು ವರ್ತಕರು ತಿಳಿದುಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಆಡಳಿತ) ಎಂ.ಬಾಲಸುಬ್ರಹ್ಮಣ್ಯ ಹೇಳಿದರು.
ಟಿ.ಕೆ.ಬಡಾವಣೆಯಲ್ಲಿರುವ ಬ್ರಹ್ಮಸ್ಥಾನ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಪ್ರಸಾದ್ ಅವರ ‘ಜಿಎಸ್‌ಟಿ ಲಾ ಆ್ಯಂಡ್ ನ್ಯಾಚುರಲ್ ಜಸ್ಟಿಸ್: ಎ ಪ್ರಾಕ್ಟಿಷನರ್ ಪರ್ಸ್ಪೆಕ್ಟಿವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರೋಕ್ಷ ತೆರಿಗೆಗಳ ಸರಳೀಕರಿಸಲಾಗಿರುವ ಜಿಎಸ್‌ಟಿ ದೇಶದಲ್ಲಿ ಸರಕು ಮತ್ತು ಸೇವೆಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ವಿಧಿಸಲಾಗುವ ಒಂದು ಸಮಗ್ರ, ಬಹುಹಂತದ ತೆರಿಗೆಯಾಗಿದೆ. ಇದು ಹಿಂದಿನ ಅನೇಕ ಪರೋಕ್ಷ ತೆರಿಗೆಗಳನ್ನು (ವಾಟ್, ಸೇವಾ ತೆರಿಗೆ, ಇತ್ಯಾದಿ) ವಿಲೀನಗೊಳಿಸಿಕೊಂಡಿದೆ. ಈ ತೆರಿಗೆಯ ಅನುಷ್ಠಾನ ಮತ್ತು ನಿರ್ವಹಣೆ ಸವಾಲಾಗಿದೆ ಎಂದರು.
ಜಿಎಸ್‌ಟಿ ಕುರಿತು ಅರ್ಥೈಸಿಕೊಳ್ಳುವುದು ಸರಳವಲ್ಲ. ಇದು ವರ್ತಕರು, ವ್ಯಾಪಾರಸ್ಥರು, ಜನರಿಗೆ ಕಷ್ಟಕರ. ಜಿಎಸ್‌ಟಿ ಕುರಿತು ಬಂದಿರುವ ಪುಸ್ತಕಗಳು ಈ ಸಮಸ್ಯೆ ನಿವಾರಣೆ ಮಾಡಲು ನೆರವಾಗುತ್ತವೆ ಎಂದರು.
ವಿವಿಧ ವಿಷಯಗಳ ಕುರಿತು ಅನೇಕ ಕೃತಿಗಳು ಬಂದಿವೆ. ಆದರೆ, ಜಿಎಸ್‌ಟಿ ಕುರಿತು ಬಂದಿರುವ ಕೃಷಿಗಳ ಸಂಖ್ಯೆ ಕಡಿಮೆ. ಸರಳ, ಸ್ಪಷ್ಟ, ನಿಖರ ಮಾಹಿತಿ ಒಳಗೊಂಡಿರುವ ಪುಸ್ತಕಗಳು ಬಂದರೆ ವರ್ತಕರು, ತೆರಿಗೆದಾರರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಮತ್ತು ಜಿಎಸ್‌ಟಿ ಮೇಲೆ ವಕಾಲತ್ತು ವಹಿಸುವ ನ್ಯಾಯವಾದಿಗಳ ಜ್ಞಾನವೂ ವಿಸ್ತಾರವಾಗುತ್ತದೆ ಎಂದರು.
ಕೆಎಲ್‌ಟಿ ಪ್ರಕಾಶಕರಾದ ಸತ್ಪಾಲ್ ಪುಲನಿ, ವಿನಾಯಕ್ ಪುಲನಿ, ಕೆಎಸ್‌ಟಿಪಿಎ ಅಧ್ಯಕ್ಷ ವಿಷ್ಣುತೀರ್ಥ ಜಮಖಂಡಿ, ಎಂಡಿಟಿಪಿಎ ಅಧ್ಯಕ್ಷ ಬಿ.ಎಸ್.ವೆಂಕಟರಾಮು, ಲೇಖಕ ಎಸ್.ಪ್ರಸಾದ್ ಇನ್ನಿತರರಿದ್ದರು.