ಸರಗೂರಿನ 4ನೇ ವಾರ್ಡ್‌ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಹಾಗೂ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಬೆಟ್ಟಯ್ಯ, ಸೌಮ್ಯಾ ಅನಿಲ್, ಜ್ಞಾನ ಪ್ರಕಾಶ ಸ್ವಾಮೀಜಿ ಸಿದ್ದರಾಜು, ಭಾಗ್ಯಲಕ್ಷ್ಮೀ ಇತರರು ಇದ್ದರು. 
ಮೈಸೂರು

ಯುವಪೀಳಿಗೆ ಸಂವಿಧಾನ ರಕ್ಷಿಸಲಿ

ಲೋಕೇಶ್ ಮನು. ಡಿ
ಸರಗೂರು: ಪ್ರಸ್ತುತ ದಿನಗಳಲ್ಲಿ ಸಂವಿಧಾನವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿವೆ. ಯುವ ಪೀಳಿಗೆ ಜಾಗರೂಕ
ರಾಗಿ ಶಿಕ್ಷಣ, ಸಂಘಟನೆ, ಹೋರಾಟ ರೂಢಿಸಿಕೊಂಡು ಮುನ್ನಡೆಯಬೇಕಿದೆ ಎಂದು ಶಾಸಕ ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ 4ನೇ ವಾರ್ಡ್‌ನ ಅಂಬೇಡ್ಕರ್ ಭವನದಲ್ಲಿ ಆದಿ ಕರ್ನಾಟಕ ಮಹಾಸಭಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೆಲ ರಾಜಕೀಯ ಪಕ್ಷಗಳು ಭಾರತದ ಪ್ರಜೆಯ ಪೌರತ್ವ ನಾಶಪಡಿಸುವ ನಿಟ್ಟಿನಲ್ಲಿ ಹಿಂಬಾಗಿಲಿನಿಂದ ಕುತಂತ್ರ ಮಾಡುತ್ತಿವೆ. ಈ ನಿಟ್ಟಿನಲ್ಲಿ ಎಸ್‌ಐಆರ್ ಜಾರಿಗೊಳಿಸಲಾಗಿದೆ. ಹಾಗಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜನರು ಜಾಗರೂಕವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಅನಿಲ್ ಚಿಕ್ಕಮಾದು ಮಾತನಾಡಿ, ಸಂವಿಧಾನದ ಮೂಲಕ ಮಹಿಳೆಯರಿಗೆ ಸಮಾನತೆ ಹಾಗೂ ಹಕ್ಕುಗಳನ್ನು ನೀಡಿದ ಮಹಾನ್ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್. ಅವರ ಕೊಡುಗೆಗಳು ಹಾಗೂ ಸಂವಿಧಾನದ ಮಹತ್ವವನ್ನು ಸ್ಮರಿಸಿ, ಅವರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುರುಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಪ್ರತಿ ಹಳ್ಳಿಗಳಲ್ಲೂ ಬಾಬಾ ಸಾಹೇಬರ ಪುತ್ಥಳಿ, ಮೂರ್ತಿಗಳು ದಿನದಿಂದ ದಿನಕ್ಕೆ ಸ್ಥಾಪನೆಯಾಗುತ್ತಿವೆ. ಆದರೆ ಅವರನ್ನು ಅನುಸರಿಸಿ ಅವರ ಮಾರ್ಗದಲ್ಲಿ ನಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕೆಇಬಿ ಕಚೇರಿ ಮುಂಭಾಗದಲ್ಲಿ ಬೆಳ್ಳಿ ರಥದಲ್ಲಿರಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬುದ್ಧ ಪುತ್ಥಳಿಗೆ ಮಾಲಾರ್ಪಣೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೆಇಬಿ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಅಂಬೇಡ್ಕರ್ ಭವನ ಬಳಿ ಅಂತ್ಯವಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಾಜಿ ಜಿಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ನಿಂಗರಾಜು, ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಮಾಜಿ ಜಿಪಂ ಸದಸ್ಯ ಎಚ್.ಸಿ.ಮಂಜುನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಅಂಬೇಡ್ಕರ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಲಂಕೆ ರಮೇಶ್, ಚಿನ್ನಣ್ಣ ಹಳೆಯೂರು, ಇಟ್ನಾ ರಾಜಣ್ಣ, ಶಿವಣ್ಣ ಸರಗೂರು, ಲಂಕೆ ಶ್ರೀನಿವಾಸ, ಮಲ್ಲೇಶ್, ಹೈರಿಗೆ ಶಿವರಾಜು, ಭೀಮನಹಳ್ಳಿ ಸೋಮೇಶ್, ಬಿಡಗಲು ಶಿವಣ್ಣ, ಪ್ರಕಾಶ್, ಮಸಹಳ್ಳಿ ಸೂರ್ಯ ಕುಮಾರ್, ಕಳಸೂರು ಬಸವರಾಜು, ರವಿಕುಮಾರ್, ಲೋಕೇಶ್, ಮರಿದೇವಯ್ಯ, ಶಿವಣ್ಣ, ಮಹೇಶ್ ಇತರರು ಇದ್ದರು.