ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಕೆ.ಎಸ್.ಸುರೇಶ, ಡಾ.ಸಿ.ಎಸ್.ಆನಂದಕುಮಾರ್, ಡಾ. ರೇಚಣ್ಣ, ಎಂ.ಎಂ.ಸ್ವಾಮಿ ಇದ್ದರು. 
ಮೈಸೂರು

ಪರೀಕ್ಷೆ ಚಿಂತನೆ ಸಾಮರ್ಥ್ಯ ಹೆಚ್ಚಿಸಲಿ

ಅವಿನಾಶ್ ಜೈನಹಳ್ಳಿ
ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಮೌಲ್ಯಮಾಪನ ಮಾಡಬೇಕು ಎಂದು ಮೈಸೂರು ಜೆಎಸ್‌ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಪರೀಕ್ಷಾ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಪರೀಕ್ಷಾ ಸುಧಾರಣೆಗಳು’ ಎಂಬ ವಿಷಯ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಗಳು ಕೇವಲ ಕಂಠಪಾಠ ಸಾಧನವಾಗದೆ ವಿದ್ಯಾರ್ಥಿಗಳ ನಿಜವಾದ ವಿಷಯದ ಗ್ರಹಿಕೆಯನ್ನು ಮೌಲ್ಯಮಾಪನ ಮಾಡಬೇಕಿದೆ ಎಂದರು. ಅಲ್ಲದೆ ಶಿಕ್ಷಣದ ಗುರಿ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ವೃದ್ಧಿಸಬೇಕಿದೆ. ಜತೆಗೆ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಚಿಂತನ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿಕೊಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಸಿ.ಎಸ್.ಆನಂದಕುಮಾರ್ ಮಾತನಾಡಿ, ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದರು.
ಶಿಕ್ಷಣದ ಉದ್ದೇಶ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸಿದಾಗ ಶೈಕ್ಷಣಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಬೋಧಕರು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ತಮ್ಮ ಜ್ಞಾನಾಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ ಇದ್ದರು. ಪ್ರಾಧ್ಯಾಪಕ ಡಾ. ವಸಂತ್ ಡಿ. ಭಟ್ ಅವರು ಫಲಿತಾಂಶ ಆಧರಿತ ಶಿಕ್ಷಣ ಹಾಗೂ ವಹಿವಾಟುಗಳು ಮತ್ತು ಮೌಲ್ಯಮಾಪನ ವಿಷಯಗಳು ಕುರಿತು ಉಪನ್ಯಾಸ ನೀಡಿದರು.