ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗುರುರಾಜ ಕರ್ಜಗಿ ಉದ್ಘಾಟಿಸಿದರು. ಪ್ರೊ.ಕೆ.ಸಿ.ಬೆಳ್ಳಿಯಪ್ಪ, ರೆಜಿನಾಲ್ಡ್ ವೆಸ್ಲಿ, ಪ್ರೊ.ಜಿ.ರಾಜಗೋಪಾಲ್, ಬಿ.ಚೇತನ್, ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ಎ.ಕೆ.ಮೋನಪ್ಪ ಇತರರಿದ್ದರು. 
ಮೈಸೂರು

ಎಐ ಯುಗದಲ್ಲಿ ಓದು, ಬರಹದ ಅಭಿರುಚಿ ಉಳಿಯಲಿ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅಭಿಮತ
ಮೈಸೂರು: ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಸೇರಿದಂತೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಈ ವೇಳೆ ಸಾಹಿತ್ಯ ಓದುವ, ಸೃಜನಶೀಲತೆಯನ್ನು ಉಳಿಸಿಕೊಳ್ಳುವ ಬಗೆ ಹೇಗೆಂಬ ಪ್ರಶ್ನೆಯೂ ನಮ್ಮ ಮುಂದಿದೆ. ಓದು ಬರಹದ ಅಭಿರುಚಿಯನ್ನು ಬೆಳೆಸಬೇಕಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.
ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮೈಸೂರು ಲಿಟ್ರರಿ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ 7ನೇ ಆವೃತ್ತಿಯ ಮೈಸೂರು ಸಾಹಿತ್ಯ ಉತ್ಸವ ಉದ್ಘಾಟಿಸಿ ಮಾತನಾಡಿದರು. ಮೈಸೂರಿಗರಿಗೆ ಸಾಹಿತ್ಯವೆಂಬುದು ಕೇವಲ ಆಭರಣವಲ್ಲ, ಜೀವನ ಮಾರ್ಗವಾಗಿದೆ. ಸಂಸ್ಕೃತಿಯು ಜೀವನವನ್ನು ಶುದ್ಧೀಕರಿಸುತ್ತದೆಂದು ನಂಬಿದ್ದಾರೆ. ಕಲೆ, ಸಂಸ್ಕೃತಿಯನ್ನು ಉತ್ಸವಗಳಿಂದಲೇ ಸಂಭ್ರಮಿಸುತ್ತಾರೆ. ಸಾಹಿತ್ಯವು ನಾಗರಿಕತೆಯ ಅಪ್ರತಿಮ ರೂಪಕವಾಗಿದೆ. ಸಾಹಿತ್ಯ ಉತ್ಸವಗಳು ನಾಗರಿಕ ಸಮಾಜದ ಕನ್ನಡಿಯಂತೆ ಎಂದರು.

ಸಾಹಿತ್ಯವು ಮನರಂಜನೆಯಷ್ಟೇ ಅಲ್ಲ, ಪ್ರತಿಯೊಂದು ವ್ಯಕ್ತಿತ್ವಕ್ಕೂ ಸ್ಫೂರ್ತಿ ನೀಡುವ ಜೀವಧಾರೆ. ಜಗತ್ತಿನ ಸವಾಲುಗಳಿಗೆ ಎದುರಾಗಲು ಶಕ್ತಿ ತುಂಬುತ್ತದೆ. ಮಾನವನ ಅಸ್ತಿತ್ವದ ಬುನಾದಿಯಾಗಿದೆ. ಮಕ್ಕಳಿದ್ದಾಗ ಚಂದಮಾಮ ನಿಯತಕಾಲಿಕೆಗೆ ಕಾಯುತ್ತಿದ್ದೆವು. ಪಂಚತಂತ್ರ ಕಥೆಗಳು ಸೆಳೆಯುತ್ತಿದ್ದವು. ನಂತರ ನಗೆ ಪುಸ್ತಕಗಳಿಗೆ ಮನಸ್ಸು ಹೊರಳಿತು. ಬೀಚಿ ಅವರ ತಿಮ್ಮನ ತಲೆ ಇಷ್ಟವಾಗಿತ್ತು. ಆ ನಂತರ, ಗಂಭೀರ ಸಾಹಿತ್ಯದ ಕಡೆಗೆ ಓದು ತಿರುಗಿತು. ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯನ್ನು ಬೌದ್ಧಿಕವಾಗಿ ಮಾಗಿಸುತ್ತದೆ. ವಿವೇಕ, ವಿವೇಚನಾ ಶಕ್ತಿಯನ್ನು ನೀಡುತ್ತದೆ ಎಂದರು.
ಮೈಸೂರು ಲಿಟ್ರರಿ ಅಸೋಸಿಯೇಷನ್ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ, ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ, ಪ್ರೊ.ಜಿ.ರಾಜಗೋಪಾಲ್, ಖಜಾಂಚಿ ಬಿ.ಚೇತನ್, ಸದಸ್ಯರಾದ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ಎ.ಕೆ.ಮೋನಪ್ಪ, ಕೆ.ಸಿ.ಹರಿದಾಸ್, ಪ್ರೊ.ಸಿ.ನಾಗಣ್ಣ, ಪ್ರೊ.ಬಿ.ಎನ್.ಬಾಲಾಜಿ, ಪ್ರೊ.ನಿರ್ಮಲ್ ಚಂದ್ರಶೇಖರ್ ಹಾಜರಿದ್ದರು.