ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮನುಸ್ಮತಿ ದಹನ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಶಿವಸುಂದರ್, ಎನ್.ಭಾಸ್ಕರ್, ಕಾಳೇಗೌಡ ನಾಗವಾರ ಹಾಗೂ ಇತರರು ಇದ್ದರು.
ಮೈಸೂರು: ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾದ ಘೋಷಣೆ ಜೈ ಸೀತಾರಾಮ್ ಆಗಲು ಎಂದಿಗೂ ಸಾಧ್ಯವಿಲ್ಲ. ಜೈ ಶ್ರೀರಾಮ್ ಬದಲು ಜೈ ಭೀಮ್ ಅಥವಾ ಜೈ ಸಂವಿಧಾನ ಘೋಷಣೆ ಮೊಳಗಬೇಕು ಎಂದು ಚಿಂತಕ ಶಿವಸುಂದರ್ ಹೇಳಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ವತಿಯಿಂದ ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ 98ನೇ ಮನುಸ್ಮತಿ ದಹನ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಗರು ಜೈ ಶ್ರೀರಾಮ್ ಘೋಷಣೆ ಕೂಗಿದಾಗ ಕಾಂಗ್ರೆಸ್ಸಿಗರು ಜೈ ಸೀತಾರಾಮ್ ಘೋಷಣೆ ಕೂಗಿದರು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸದನಕ್ಕೆ ರಾಮ, ಸೀತೆಯನ್ನು ತಂದು ಬಿಟ್ಟರು. ಬಿಜೆಪಿಯವರ ಘೋಷಣೆಗೆ ಪರ್ಯಾಯವಾಗಿ ಜೈ ಭೀಮ್ ಅಥವಾ ಜೈ ಸಂವಿಧಾನ ಘೋಷಣೆ ಕೂಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಮೇಲ್ವರ್ಗಕ್ಕೆ ಸೇರಿದ ಗಂಡಸು ತಳ ಸಮುದಾಯದ ಮಹಿಳೆಯನ್ನು ಮದುವೆಯಾಗಿ ಮಕ್ಕಳನ್ನು ಹಡೆದರೆ ತಪ್ಪಿಲ್ಲ. ಆದರೆ, ಕೆಳ ವರ್ಗದ ಪುರುಷ-ಮೇಲ್ವರ್ಗದ ಮಹಿಳೆಯೊಂದಿಗೆ ಮದುವೆಯಾಗಿ ಮಕ್ಕಳಾದರೆ ಮಹಾ ಅಪರಾಧ. ಈ ಮನಸ್ಥಿತಿಯಿಂದಲೇ ಹುಬ್ಬಳ್ಳಿಯಲ್ಲಿ ಮಾನ್ಯ ಎಂಬ ಹೆಣ್ಣು ಮಗಳ ಹತ್ಯೆ ನಡೆದಿದೆ. ಈ ರೀತಿಯ ಕ್ರೌರ್ಯಕ್ಕೆ ಮನುಸ್ಮತಿ ಮತ್ತು ಪುರಾಣಗಳಲ್ಲಿನ ನಿಯಮಗಳೇ ಕಾರಣ ಎಂದು ಆರೋಪಿಸಿದರು.
ಮನುಸ್ಮತಿಯ ಪ್ರತಿ ಮಾತಿನಲ್ಲಿ ಬ್ರಹ್ಮನ ಆದೇಶವೆಂದು ಉಲ್ಲೇಖಿಸಲಾಗಿದೆ. ರಾಮಾಯಾಣದಲ್ಲಿ ಶಂಭುಕ ವಧೆ, ಸೀತೆಯ ಪಾವಿತ್ರ್ಯತೆ ಘಟನೆಗಳು ಮನುಸ್ಮತಿಯ ನಿಯಮದ ಪಾಲನೆಯಾಗಿದೆ. ದೇಶದಲ್ಲಿ ಜಾತಿಯೇ ಕಾನೂನಾಗಿದೆ. ಹಾಗಾಗಿ ನಾವು ಜಾತಿ ವಿನಾಶ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಜಾತಿ ವಿನಾಶವಾಗುವರೆಗೂ ಹಿಂದು ಎನ್ನುವುದು ಧರ್ಮವಾಗಲು, ಭಾರತ ದೇಶವಾಗಲೂ, ಹಿಂದುಗಳು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಿಂದು ಧರ್ಮವನ್ನು ಮಾನವೀಯಕರಣಗೊಳಿಸಲು ಪ್ರಯತ್ನಿಸಿದ್ದರು. ಇದಕ್ಕಾಗಿ ಚೌಡರ್ ಕೆರೆ ಸತ್ಯಾಗ್ರಹ, ಕಾಲರಂ ದೇವಸ್ಥಾನ ಪ್ರವೇಶದಂತ ಹೋರಾಟಗಳನ್ನು ನಡೆಸಿದ್ದರು. ಆದರೆ, ಅವರ ಪ್ರಯೋಗಗಳು ವಿಫಲಗೊಂಡವು. ಎಲ್ಲಿಯವರೆಗೆ ಸ್ಮತಿ, ಪುರಾಣಗಳು ಇರುವುದೋ ಅಲ್ಲಿಯವರೆಗೆ ಹಿಂದು ಧರ್ಮ ಸುಧಾರಣೆ ಆಗಲು ಸಾಧ್ಯವಿಲ್ಲ ಎಂದರು.
ಶ್ರೀ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮನುವಾದಿಗಳು ಸಂವಿಧಾನವನ್ನು ಮೌನವಾಗಿ ಮುಗಿಸಲು ಪಣತೊಟ್ಟು ಅದರಲ್ಲಿ ಯಶಸ್ವಿ ಆಗುತ್ತಿದ್ದಾರೆ. ಅವರು ಸಂವಿಧಾನದ ಮೂಲ ತತ್ವಗಳನ್ನು ಅಸ್ಥಿರಗೊಳಿಸುತ್ತಿದ್ದಾರೆ. ನಾವು ಮನೆಯಲ್ಲಿ ಮನುವಾದ ಬಾಯಲ್ಲಿ ಭೀಮವಾದ ಹೇಳುತ್ತಿದ್ದೇವೆ. ಹೀಗಾಗಿ ನಮ್ಮನ್ನು ಹತ್ತಿಕ್ಕಿ ಅವರು ಮುನ್ನುಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಹಿರಿಯ ಸಂಸ್ಕೃತಿ ಚಿಂತಕ ಕಾಳೇಗೌಡ ನಾಗವಾರ, ಹಿರಿಯ ರಂಗಕರ್ಮಿ ಎಚ್.ಜನಾರ್ದನ್, ಲೇಖಕ ಸಿ.ಹರಕುಮಾರ್, ಎಸ್‌ಸಿ-ಎಸ್‌ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ದಲಿತಪರ ಹೋರಾಟಗಾರ ಹರಿಹರ ಆನಂದಸ್ವಾಮಿ, ವಕೀಲ ತಿಮ್ಮಯ್ಯ, ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಗೌರವಾಧ್ಯಕ್ಷ ಕಲ್ಲಳ್ಳಿ ಕುಮಾರ್ ಹಾಗೂ ಇತರರು ಇದ್ದರು.