ಎನ್.ಆರ್.ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ ಮತದಾರರ ಸೌಲಭ್ಯ ಕೇಂದ್ರಕ್ಕೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸಿ.ವೆಂಕಟೇಶ್ ಇತರರಿದ್ದರು. 
ಮೈಸೂರು

ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿರಲಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • - ಬಿಎಲ್‌ಒ, ನೋಂದಣಿ ಅಧಿಕಾರಿಗಳಿಗೆ ಪಿ.ಎಸ್.ವಸ್ತ್ರದ್ ಸೂಚನೆ
  • ಮತದಾರರ ಸೌಲಭ್ಯ ಕೇಂದ್ರಕ್ಕೆ ಭೇಟಿ, ಪರಿಶೀಲನೆ
ಮೈಸೂರು: ಮತದಾರರ ಅನುಕೂಲಕ್ಕಾಗಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಅಂಗವಾಗಿ ಸ್ಥಾಪಿಸಲಾಗಿರುವ ಮತದಾರರ ಸೌಲಭ್ಯ ಕೇಂದ್ರಕ್ಕೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು  ಭೇಟಿ ನೀಡಿ ಪರಿಶೀಲಿಸಿದರು.
 ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಲಯ ಕಚೇರಿ-9ರ ವ್ಯಾಪ್ತಿಯ ವಾರ್ಡ್ ಸಂಖ್ಯೆ-39ರ ಎಂಸಿಸಿ ಕಾಲನಿಯಲ್ಲಿ ಮತಗಟ್ಟೆ ಸಂಖ್ಯೆ 144, 145, 146 ಹಾಗೂ 147ರಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಕೇಂದ್ರದಲ್ಲಿ ಸಾರ್ವಜನಿಕರಿಗೆ ಕಲ್ಪಿಸಲಾಗಿರುವ ಸೌಲಭ್ಯಗಳು, ಅರ್ಜಿಗಳ ಸ್ವೀಕಾರ, ದಾಖಲೆಗಳ ಪರಿಶೀಲನೆ ಹಾಗೂ ಎಸ್‌ಐಆರ್ ಕಾರ್ಯದ ಪ್ರಗತಿಯನ್ನು ಪಿ.ಎಸ್.ವಸ್ತ್ರದ್ ಅವಲೋಕಿಸಿದರು. 
ಮತದಾರರೊಂದಿಗೆ ನೇರವಾಗಿ ಸಂವಾದ ನಡೆಸಿ, ಕೇಂದ್ರದಲ್ಲಿ ದೊರೆಯುತ್ತಿರುವ ಸೇವೆಗಳ ಕುರಿತು ಮಾಹಿತಿ ಪಡೆದು ಅವರ ಅಭಿಪ್ರಾಯಗಳನ್ನು ಆಲಿಸಿದರು. ಅಲ್ಲದೆ, ಬಿಎಲ್‌ಒಗಳ ಮೇಲುಸ್ತುವಾರಿಗಳು, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಎಸ್‌ಐಆರ್ ಕಾರ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಜತೆಗೆ, ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಗತ್ಯ ಮಾರ್ಗದರ್ಶನ ನೀಡಿದರು.
ಎನ್‌ಆರ್ ಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿ ಸಿ.ವೆಂಕಟೇಶ್, ಬಿಇಒ, ಕಂದಾಯ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇತರರು ಇದ್ದರು.