ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸಲಹೆ
ಹುಣಸೂರು: ನಗರ ವ್ಯಾಪ್ತಿಯ ಬಡವರಿಗಾಗಿ ಶಾಶ್ವತ ಸೂರು ಕಲ್ಪಿಸಲು ಒಟ್ಟು 34.34 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಆಶ್ರಯ ಸಮಿತಿ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕಾರ್ಯ ಮಾಡಲಿ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ತಮ್ಮ ಅವಧಿಯಲ್ಲಿ ಜಿಪ್ಲಸ್-2 ಮಾದರಿಯಲ್ಲಿ ಮನೆ ನಿರ್ಮಿಸಿಕೊಡಲು ಚಿಂತಿಸಲಾಗಿತ್ತು. ನಾನು ಶಾಸಕರಾಗಿದ್ದ ವೇಳೆ ಇದಕ್ಕಾಗಿ 8 ಎಕರೆ ಜಮೀನು ಖರೀದಿಸಲಾಗಿತ್ತಲ್ಲದೆ ಹಿಂದಿನ ಶಾಸಕರು ಗುರುತಿಸಿದ್ದ ಸರ್ಕಾರಿ ಭೂಮಿ ಸೇರಿ 34.34 ಎಕರೆ ಭೂಮಿ ಗುರುತಿಸಲಾಗಿತ್ತು. ಈ ಪೈಕಿ 3.33 ಎಕರೆ ಭೂಮಿಯಲ್ಲಿ ವಾಂಬೆ ಹೌಸ್ ನಿರ್ಮಿಸಲಾಗಿದೆ. ಸರ್ವೇ ನಂ.166, 167, 207, 208, 209, 297ರ ಪೈಕಿ ಉಳಿಕೆ 31.1 ಎಕರೆ ಜಮೀನು ಉಳಿದಿದ್ದು, ಜಿಪ್ಲಸ್ ಮಾದರಿ ಮನೆ ನಿರ್ಮಿಸಿದ್ದೇ ಆದಲ್ಲಿ ಸುಮಾರು 3000 ಜನರಿಗೆ ಮನೆ ನಿರ್ಮಿಸಬಹುದು. ಹಾಲಿ ಶಾಸಕರು ಆಶ್ರಯ ಸಮಿತಿ ಸಭೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ನಾನೂ ಕೈಜೋಡಿಸಿ ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾವು ಜಿಪ್ಲಸ್-2 ಮಾದರಿ ಮನೆ ನಿರ್ಮಿಸಲು ಮುಂದಾಗಿದ್ದ ವೇಳೆ ಹಿಂದೆ ಕೋಡಿ ಪಾಪಣ್ಣ ಶಾಸರಾಗಿದ್ದ ಅವಧಿ 800ಕ್ಕೂ ಹೆಚ್ಚು ನಗರವಾಸಿಗಳಿಗೆ ಹಾಗೂ ಇದಕ್ಕಿಂತ ಹಿಂದಿನ ಪುರಸಭೆ ಅವಧಿಯಲ್ಲಿ ಅನರ್ಹರಿಗೂ ಹಕ್ಕುಪತ್ರ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಅರ್ಹರನ್ನು ಗುರುತಿಸುವ ಕಾರ್ಯ ನಡೆಸಿದ್ದು, ಇದೆಲ್ಲವೂ ನನೆಗುದಿಗೆ ಬಿದ್ದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ಪಕ್ಷದ ನಗರಾಧ್ಯಕ್ಷ ರವಿಪ್ರಸನ್ನ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ, ಮಾಜಿ ಸದಸ್ಯ ಸ್ವಾಮಿಗೌಡ, ಪಕ್ಷದ ನಿಕಟಪೂರ್ವ ಕಾರ್ಯಾಧ್ಯಕ್ಷ ಪುಟ್ಟರಾಜು ಇದ್ದರು.