ಗರಡುಗಂಭ ಮಂಜುನಾಥ್ 
ಮೈಸೂರು

ಮಂತ್ರಿಮಂಡಲದಲ್ಲಿ ಅಹಿಂದ ಸಮುದಾಯಕ್ಕೆ ಆದ್ಯತೆ ಸಿಗಲಿ

ಪ್ರಮುಖ ಮುಖ್ಯಾಂಶಗಳು

  • ಅಹಿಂದ ಸಮುದಾಯಗಳಿಗೆ ಮಂತ್ರಿಮಂಡಲದಲ್ಲಿ ನ್ಯಾಯಸಮ್ಮತ ಪ್ರಾತಿನಿಧ್ಯ
  • ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನ
ಕೆ.ಆರ್.ನಗರ: ಅಹಿಂದ ಸಮುದಾಯಗಳಿಗೆ ಮಂತ್ರಿಮಂಡಲದಲ್ಲಿ ನ್ಯಾಯಸಮ್ಮತ ಪ್ರಾತಿನಿಧ್ಯ ನೀಡುವ ಜತೆಗೆ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತುರ್ತಾಗಿ ಗಮನಹರಿಸಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಬ ಮಂಜುನಾಥ್ ಆಗ್ರಹಿಸಿದ್ದಾರೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 75 ರಷ್ಟು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಪ್ರಮುಖ ಭಾಗವನ್ನು ಹೊಂದಿದ್ದರೂ, ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರಕಿಲ್ಲ. ಈಗ ಸಚಿವ ಸಂಪುಟ ಪುನಾರಚನೆ ನಡೆಯುತ್ತಿರುವ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಹಿಂದ ಸಮುದಾಯದ ಕನಿಷ್ಠ 25 ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಕುರುಬ ಸಮುದಾಯದ ಶಾಸಕರೆಂದು ಇರುವುದು ಡಿ.ರವಿಶಂಕರ್ ಮಾತ್ರ. ಮುಂದಿನ ದಿನಗಳಲ್ಲಿ ಸಮುದಾಯದವರನ್ನು ಸಂಘಟಿಸಿ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರಬೇಕಾಗಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ತಿಳಿಸಿದ್ದಾರೆ.
ವಿವಿಧ ನಿಗಮ, ಮಂಡಳಿ ಹಾಗೂ ನಿಗಮಗಳ ನೇಮಕಾತಿಗಳಲ್ಲಿ ಅಹಿಂದ ಸಮುದಾಯಗಳ ಪಾಲು ಜನಸಂಖ್ಯೆ ಅನುಪಾತಕ್ಕೆ ತಕ್ಕಂತೆ ಇರಬೇಕು. ಅನುದಾನ ಹಂಚಿಕೆ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ಅಹಿಂದ ಸಮುದಾಯಗಳಿಗೆ ಸಮರ್ಪಕ ಪಾಲು ದೊರಕಬೇಕು. ಸಾಮಾಜಿಕ ನ್ಯಾಯದ ತತ್ವಗಳು ಕೇವಲ ಘೋಷಣೆಗಳಲ್ಲಿ ಸೀಮಿತವಾಗದೆ ಆಡಳಿತದಲ್ಲಿ ಸ್ಪಷ್ಟವಾಗಿ ಪ್ರತಿ ಫಲಿಸಬೇಕು. ಆಗ ಮಾತ್ರ ಸಮ ಸಮಾಜದ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ಆಗ್ರಹಿಸಿದ್ದಾರೆ.