ಹುಣಸೂರು ನಗರದ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿದರು. ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ವಿಷಕಂಠಪ್ಪ, ಉಂಡುವಾಡಿ ಸಿ.ಚಂದ್ರೇಗೌಡ ಇತರರು ಇದ್ದರು.  
ಮೈಸೂರು

ಹುಣಸೂರು ತಾಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸಲಿ

ಪ್ರಮುಖ ಮುಖ್ಯಾಂಶಗಳು

  • ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಒತ್ತಾಯ
ಹುಣಸೂರು: ತಾಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಒತ್ತಾಯಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರೈತಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏತ ನೀರಾವರಿ ಯೋಜನೆಯಡಿ ಲಕ್ಷ್ಮಣತೀರ್ಥ ನದಿ ನೀರನ್ನು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಸಣ್ಣ ಮತ್ತು ಭಾರಿ ನೀರಾವರಿ ಇಲಾಖೆಗಳು ಮುಂದಾಗಬೇಕು. ಕೆಲವೆಡೆ ಕೆರೆಗಳು ತುಂಬಿವೆ. ಮತ್ತೆ ಕೆಲವಡೆ ಈ ಕಾರ್ಯ ತೃಪ್ತಿದಾಯಕವಾಗಿ ಆಗುತ್ತಿಲ್ಲ. ಹಾರಂಗಿ ನಾಲೆಯಿಂದ ನೀರು ಹರಿಸುವ ಕಾರ್ಯದ ಕುರಿತು ಅಧಿಕಾರಿಗಳು ಹೆಚ್ಚಿನ ಗಮನವಹಿಸಲಿ ಎಂದು ಒತ್ತಾಯಿಸಿದರು.
ಅಧ್ಯಯನ ಶಿಬಿರ: ಸೆ.6ರಂದು ಮೈಸೂರು ತಾಲೂಕು ಹುಯಿಲಾಳು ಬನವಾಸಿ ತೋಟದಲ್ಲಿ ಸಂಘದ ವತಿಯಿಂದ ಅಧ್ಯಯನ ಶಿಬಿರ ಆಯೋಜಿಸಿದ್ದು, ಸಾಹಿತಿ ದೇವನೂರು ಮಹದೇವು, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಮತ್ತಿತರ ಪದಾಧಿಕಾರಿಗಳು ಭಾಗವಹಿಸುತ್ತಿದ್ದು, ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕೋರಿದರು.
ಪಿ.ಪಟ್ಟಣದಲ್ಲೂ ಮಳೆ ಕೊರತೆೆ: ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ರಾಜ್ಯ ಸರ್ಕಾರ ಹುಣಸೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಪಕ್ಕದ ಪಿರಿಯಾಪಟ್ಟಣ ತಾಲೂಕಿನಲ್ಲೂ ಮಳೆ ಕೊರತೆ ರೈತರನ್ನು ಸಂಕಟಕ್ಕೆ ಸಿಲುಕಿಸಿದ್ದು, ಅದನ್ನೂ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಲಿ ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಗೌರವಾಧ್ಯಕ್ಷ ವಿಷಕಂಠಪ್ಪ, ಖಜಾಂಚಿ ಕೆ.ಬಿ. ಜಯಣ್ಣ, ಜಿಲ್ಲಾ ಖಜಾಂಚಿ ಶ್ಯಾನುಭೋಗನಹಳ್ಳಿ ಈಶ್ವರ್, ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡವಾಡಿ ಚಂದ್ರೇಗೌಡ, ಅಣ್ಣಯ್ಯನಾಯಕ, ತಿಪ್ಪೂರು ಸೋಮಶೇಖರ್, ರಾಮಕೃಷ್ಣೇಗೌಡ, ಧರ್ಮಾಪುರ ಅಧ್ಯಕ್ಷ ವೆಂಕಟಾಚಲಪತಿ ನಾಯಕ, ವೆಂಕಟೇಶ್, ಚಾಮೇಗೌಡ, ಹುಲ್ಯಾಳು ಮಹದೇವು, ಹರಳಹಳ್ಳಿ ಬಸವರಾಜು, ರಾಮಪಟ್ಟಣ ಈಶ್ವರ್, ಇತರ ಗ್ರಾಮ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.