ತಾಲೂಕು ಮುಖಂಡ ಕೆಂಚೇಗೌಡ  
ಮೈಸೂರು

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲಿ

ಹುಣಸೂರು: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕೆಂದು ತಾಲೂಕು ಮುಖಂಡ ಕೆಂಚೇಗೌಡ ಒತ್ತಾಯಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಈ ಕುರಿತು ಸತತ ಹೋರಾಟಗಳು, ಪಾದಯಾತ್ರೆಗಳನ್ನು ನಡೆಸಲಾಗಿದೆ. ಅಲ್ಲದೆ ಕನಕಗುರುಪೀಠ, ರಾಜ್ಯ ಕುರುಬರ ಸಂಘ, ಹಾಲುಮತ ಮಹಾಸಭಾ ಇನ್ನಿತರ ಸಂಘಟನೆಗಳು ಈ ಕುರಿತು ಒತ್ತಾಯಿಸುತ್ತಲೇ ಬಂದಿವೆ. ರಾಜ್ಯ ಸರ್ಕಾರ ಈ ಹಿಂದೆ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಹೀಗಿದ್ದೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲವೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಕುರುಬ ಸಮುದಾಯ ಪ್ರಸ್ತುತ ಹಿಂದುಳಿದ ವರ್ಗ 2ಎ ಪ್ರವರ್ಗದಲ್ಲಿದ್ದು, ಎಸ್‌ಟಿಗೆ ಸೇರ್ಪಡೆಯಾದರೆ ಅಲ್ಲಿರುವ ವಾಲ್ಮೀಕಿ ಸಮುದಾಯ ಮತ್ತು ಕುರುಬ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಟಿ ಮೀಸಲಾತಿಯನ್ನು ಶೇ.14 ಅಥವಾ ಅದಕ್ಕಿಂತ ಹೆಚ್ಚಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಪ್ಪೇಗೌಡ, ತಮ್ಮೇಗೌಡ, ಜವರೇಗೌಡ ಇದ್ದರು.