ಪಿರಿಯಾಪಟ್ಟಣದ ಕೊಡಗು ಗೌಡಸಮಾಜದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 15ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕೊಡಗು ಗೌಡಸಮಾಜದ ಅಧ್ಯಕ್ಷ ಪೊಕ್ಕಳಂಡ ವಸಂತಕುಮಾರ್ ಉದ್ಘಾಟಿಸಿದರು. ಕುಯ್ಯುಮುಡಿ ಅಶ್ವಿನ್ ಕುಮಾರ್, ಕುಡಕಂಡಿ ಬಾಲಕೃಷ್ಣ , ಮೇಡತನ ಶಿವಾಜಿ, ಕುಯ್ಯುಮುಡಿ ಮುತ್ತಣ್ಣ, ನಿಡ್ಯಮಲೆ ಕೃಷ್ಣಪ್ಪ, ಬೈಲೆರ ಕಾವೇರಮ್ಮ ಇತರರು ಇದ್ದರು.
ಪಿರಿಯಾಪಟ್ಟಣ: ಕೊಡಗು ಗೌಡ ಜನಾಂಗದ ಪ್ರತಿಯೊಬ್ಬರೂ ಅರೆಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಸಮಾಜದ ಅಧ್ಯಕ್ಷ ಪೊಕ್ಕಳಂಡ ವಸಂತಕುಮಾರ್ ತಿಳಿಸಿದರು.
ಪಟ್ಟಣದ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 15ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
2011ರ ಡಿ.15 ರಂದು ಸರ್ಕಾರ ಅಧಿಕೃತವಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಎಂದು ಘೋಷಣೆ ಮಾಡಿ ಇಂದಿಗೆ 14 ವರ್ಷ ಪೂರೈಸಿದೆ. ಇದಕ್ಕೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಶ್ರಮ ಮತ್ತು ಕೊಡುಗೆಯನ್ನು ನಾವು ಸ್ಮರಿಸಬೇಕಿದೆ ಎಂದರು.
ನಮ್ಮ ಅರೆಭಾಷೆ ಜನಾಂಗದಲ್ಲಿ ಜನಿಸಿದ ಪ್ರತಿಯೊಬ್ಬರೂ ಅರೆಭಾಷೆ ಬಳಕೆ ಮಾಡಬೇಕು, ರಾಷ್ಟ್ರಕ್ಕೆ ಹಿಂದಿ ಪ್ರಥಮ ಭಾಷೆಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಭಾಷೆ ಮುಖ್ಯ ಭಾಷೆಯಾಗಿದೆ. ಅದರಂತೆ ಕರ್ನಾಟಕದಲ್ಲಿ ಕನ್ನಡ ಭಾಷೆ ಮುಖ್ಯವಾಗಿದ್ದು ಅದೇ ರೀತಿ ಕೊಡಗು ಗೌಡ ಜನಾಂಗದಲ್ಲಿ ಜನಿಸಿದವರು ಅರೆ ಭಾಷೆಯನ್ನು ಕಲಿಯಬೇಕು, ಪ್ರೀತಿಸಬೇಕು. ಅರೆಭಾಷೆ ನಮ್ಮೆಲ್ಲರ ಪ್ರೀತಿಪೂರ್ವಕವಾದ ಭಾಷೆಯಾಗಿದ್ದು, ನಮ್ಮ ಮಕ್ಕಳಿಗೂ ಕಲಿಸಬೇಕು. ಅರೆಭಾಷೆ ಅಕಾಡೆಮಿಯು ಸರ್ಕಾರದ ಅಡಕದಲ್ಲಿ ಸೇರಿದ್ದು ಅದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಮುಖಂಡರಾದ ಕುಯ್ಯುಮುಡಿ ಅಶ್ವಿನ್ ಕುಮಾರ್, ಕುಡಕಂಡಿ ಬಾಲಕೃಷ್ಣ , ಮೇಡತನ ಶಿವಾಜಿ, ಕುಯ್ಯುಮುಡಿ ಮುತ್ತಣ್ಣ, ನಿಡ್ಯಮಲೆ ಕೃಷ್ಣಪ್ಪ, ಬೈಲೆರ ಕಾವೇರಮ್ಮ ಮಾತನಾಡಿದರು. ಸಮುದಾಯದ ಕುಟುಂಬ ಸದಸ್ಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಗೆಲುವು ಸಾಧಿಸಿದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. 80 ವರ್ಷ ಪೂರೈಸಿದ ಸದಸ್ಯರನ್ನು ಗೌರವಿಸಲಾಯಿತು.
ಸಮಾಜದ ಉಪಾಧ್ಯಕ್ಷ ಆರಂಬೂರು ಜೋಯಪ್ಪ, ಕಾರ್ಯದರ್ಶಿ ಪೂಜಾರಿರ ರವಿ, ಜಂಟಿ ಕಾರ್ಯದರ್ಶಿ ನಿಡ್ಯಮಲೆ ಪೊಣಚ್ಚ, ಖಜಾಂಚಿ ಕರೆಮನೆ ವಿಠಲ, ನಿರ್ದೇಶಕರಾದ ಪಾರಿವಾರನ ಮೋಹನ್ ಕುಮಾರ್, ಕೂರನ ಪೂಣಚ್ಚ, ಸೂದನ ಸುನಂದ, ಕೂಡಕಂಡಿ ಜಗದೀಶ್, ಕೋಲ್ಪೆ ದೇವಕಿ, ಬೆಳ್ಳಿಯಂಡ್ರ ಭಾಗ್ಯ ಲಕ್ಷ್ಮೀ, ಕ್ರೀಡಾ ಸಮಿತಿ ಸದಸ್ಯರಾದ ಕುಯ್ಯುಮುಡಿ ಅಶ್ವಥ್ ಕುಮಾರ್, ಕೋಲ್ಪೆ ಪವನ್ ಕುಮಾರ್, ಕರೆಮನೆ ಗಿರೀಶ್, ನಿಡ್ಯಮಲೆ ವೇಣುಗೋಪಾಲ್, ನೆಲ್ಲಿಪುಣಿ ಮಂಜು, ಹೊಸ್ಕಲು ಧನು, ಮುಕ್ಕಾಟಿ ಸತೀಶ್ ಹಾಗೂ ಸಮುದಾಯದ ಸದಸ್ಯರು ಇದ್ದರು.