ಡಾ.ಯತೀಂದ್ರ ಸಿದ್ದರಾಮಯ್ಯ 
ಮೈಸೂರು

ಮನಸ್ಥಿತಿ ಬದಲಿಸಲಿ ಕೇಂದ್ರ ಸರ್ಕಾರ

ಅವಿನಾಶ್ ಜೈನಹಳ್ಳಿ
ನಾವು ಏನೇ ತಪ್ಪು ಮಾಡಿದರೂ ಯಾರಿಗೂ ಬಗ್ಗಲ್ಲ ಎಂಬ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇತ್ತು. ಇನ್ನು ಮುಂದೆ ಆ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮೇರ್ಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದೆ ಎಂದು ಹೇಳಿದರು.

ಕೆಪಿಎಸ್ಸಿ ಹಗರಣ ಕುರಿತು ಮಾತನಾಡಿದ ಅವರು, ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಅವರನ್ನು ವಜಾಗೊಳಿಸುವ ಅಧಿಕಾರ ಸರ್ಕಾರಕ್ಕೆ ಇರಲಿಲ್ಲ. ರಾಜ್ಯಪಾಲರ ಮೂಲಕವೇ ಅವರನ್ನು ವಜಾಗೊಳಿಸಲಾಗಿದೆ. ಈಗ ಅದೇ ಭ್ರಷ್ಟನ ಪರವಾಗಿ ಬಿಜೆಪಿಯ ಬೆಂಬಲಿತ ವಕೀಲರೇ ನ್ಯಾಯಾಲಯಕ್ಕೆ ಹೋಗಿದ್ದಾರೆ. ಒಂದು ಕಡೆ ಹಗರಣ ಎನ್ನುತ್ತಾರೆ, ಮತ್ತೊಂದು ಕಡೆ ಹಗರಣ ಮಾಡಿದವರ ಪರ ನಿಲ್ಲುತ್ತಾರೆ. ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್ ಎಂದು ಆರೋಪಿಸಿದರು.

ನಿರ್ಧಾರ ಬದಲಾಯಿಸಲ್ಲ

ನಾನು ಒಬ್ಬ ಮಗನಾಗಿ ನಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳುವುದಿಲ್ಲ. ಅವರಿಗೆ ಈಗ 80 ವರ್ಷವಾಗಿದೆ. ಆರೋಗ್ಯ ಕಾಪಾಡಿಕೊಂಡು ವಿಶ್ರಾಂತಿ ಜೀವನ ನಡೆಸಬೇಕು. ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅವರು ಒಮ್ಮೆ ನಿರ್ಧಾರ ಮಾಡಿದರೆ ಅದನ್ನು ಬದಲಾಯಿಸುವವರಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ರೈತರಿಗೆ ತೊಂದರೆ ಸಲ್ಲ

ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ನೋಟಿಸ್ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರಿಗೆ ತೊಂದರೆ ಕೊಡಬಾರದು. ಅವುಗಳ ವಿರುದ್ಧ ಈಗಾಗಲೇ ಕಾನೂನು ತಂದಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ನೋಟಿಸ್ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ನಿಶ್ಚಿತ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಸೋಮವಾರ ಭೇಟಿಯಾಗಲಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಲಿದ್ದು, ಈ ವಾರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಮೈಸೂರು ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಡ್ರಗ್ಸ್ ವ್ಯಸನಿಗಳಿದ್ದಾರೆ: ನಗರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಡ್ರಗ್ಸ್ ವ್ಯಸನಿಗಳಿದ್ದಾರೆ ಎಂಬುದನ್ನು ನಿರಾಕರಿಸುವುದಿಲ್ಲ. ಆದ್ದರಿಂದ ಡ್ರಗ್ಸ್ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.