ಮಹಾಜನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್‌ನ ಸ್ವಾಮಿ ಅನುಕೂಲಾನಂದ ಮಾತನಾಡಿದರು. ಡಾ. ಟಿ. ವಿಜಯಲಕ್ಷ್ಮೀ ಮುರಳೀಧರ್, ಡಾ. ಎಸ್.ಆರ್. ರಮೇಶ್, ಡಾ. ಬಿ.ಆರ್.ಜಯಕುಮಾರಿ ಇದ್ದರು. 
ಮೈಸೂರು

ಶಿಕ್ಷಕರು ನವೀನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಸ್ವಾಮಿ ಅನುಕೂಲಾನಂದ ಸಲಹೆ ಪ್ರೇರಣಾದಾಯಕ ಉಪನ್ಯಾಸ
  • ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ
  • ಯುವ ಜನರು ಸ್ಪಷ್ಟವಾದ ಗುರಿ ಹೊಂದಿರುವುದು ಅವಶ್ಯಕತೆ
 ಮೈಸೂರು: ಶಿಕ್ಷಕರು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳ್ಳದೆ ನವೀನ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ನೀಡುವ ಕಡೆ ಗಮನಹರಿಸಬೇಕು ಎಂದು ಚಿನ್ಮಯ ಮಿಷನ್‌ನ ಸ್ವಾಮಿ ಅನುಕೂಲಾನಂದ ಹೇಳಿದರು.
ಜಯಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಪರಿವರ್ತನಾತ್ಮಕ ಶಿಕ್ಷಣದ ಮೂಲಕ ರಾಷ್ಟ್ರದ ಪ್ರಗತಿಗೆ ಶಿಕ್ಷಕರು ಕೈಜೋಡಿಸಬೇಕು. ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ಕಳೆದುಕೊಂಡ ತನ್ನ ಗತವೈಭವವನ್ನು ಪರಿವರ್ತನಾತ್ಮಕ ಶಿಕ್ಷಣದ ಮೂಲಕ ಮತ್ತೆ ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ನೈಜ ಜೀವನದ ಯೋಜನೆಗಳೊಂದಿಗೆ ತೊಡಗಿಸಬೇಕು. ಇಂತಹ ಅನುಭವಗಳು ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಸವಾಲು ನೀಡುವುದರ ಜತೆಗೆ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಬೆಳೆಸಲು ಸಹಾಯ ಮಾಡುತ್ತದೆ. ಶಿಕ್ಷಣವು ಕೇವಲ ಮಾಹಿತಿಯನ್ನು ಹಂಚಿಕೊಳ್ಳುವುದಲ್ಲ. 
ಅದು ಜೀವನವನ್ನು ಕಟ್ಟಿಕೊಳ್ಳಲು ಹಾಗೂ ಬದಲಾಯಿಸಿಕೊಳ್ಳಲು ಸಹಕಾರಿಯಾಗಿರಬೇಕು. ಇಂತಹ ಕಲಿಕೆ ಮಾತ್ರ ಅರ್ಥಪೂರ್ಣವಾಗಿರುತ್ತದೆ. ಸಮಾಜ ಹಾಗೂ ದೇಶದ ಪ್ರಗತಿಗೆ ನಾಂದಿಯಾಗಿರುತ್ತದೆ ಎಂದು ನುಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಯಾವ ವೃತ್ತಿಯಾದರೂ ಸರಿಯೇ. ಆದರೆ ಅದರಲ್ಲಿ ಶ್ರೇಷ್ಠತೆ ಸಾಧಿಸುವತ್ತ ಅವರ ಪ್ರಯತ್ನ ವಿಪುಲವಾಗಿರಬೇಕು. ಹಾಗೆಯೇ ಯುವ ಜನರು ಸ್ಪಷ್ಟವಾದ ಗುರಿ ಹೊಂದಿರುವುದು ಅವಶ್ಯಕತೆ ಇದೆ. ಯುವ ಜನತೆಗೆ ಭಾರತದ ಸಮೃದ್ಧ, ಭೌತಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸುವುದರ ಅಗತ್ಯ ಇದೆ ಎಂದು ಹೇಳಿದರು.
ಭಾರತವು ಪ್ರಾಚೀನ ಕಾಲದಲ್ಲಿ ಜ್ಞಾನ, ವಿಜ್ಞಾನ ಮತ್ತು ನವೋತ್ಪಾದನೆಯ ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವ ನೀಡಿದ ಉದಾಹರಣೆಗಳಿವೆ. ಆದರೆ ವಸಾಹತುಶಾಹಿ ಕಾಲದಲ್ಲಿ ತನ್ನ ವೈಭವವನ್ನು ಕಳೆದುಕೊಂಡಿದ್ದು ವಿಷಾದಕರ. ಬ್ರಿಟಿಷರು ಭಾರತಕ್ಕೆ ಬರುವ ಮುಂಚೆ ವಿಶ್ವದ ಒಟ್ಟು ಆರ್ಥಿಕ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.23ರಷ್ಟಿತ್ತು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕುಸಿತ ಕಂಡಿತ್ತು. ಇದೀಗ ಭಾರತ ಮತ್ತೆ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, 5 ಟ್ರಿಲಿಯನ್ ಡಾಲರ್, ಆರ್ಥಿಕತೆಯತ್ತ ಸಾಗುತ್ತಿದೆ ಎಂದರು.
ತಮಿಳುನಾಡಿನ ಐತಿಹಾಸಿಕ ಬೃಹದೀಶ್ವರ ದೇವಾಲಯ ಮತ್ತು ಜಗನ್ನಾಥಪುರಿ ದೇವಾಲಯಗಳು ಪ್ರಾಚೀನ ಭಾರತೀಯರ ಅದ್ಭುತ ಇಂಜಿನಿಯರಿಂಗ್ ಮತ್ತು ಕಲಾತ್ಮಕ ಸಾಮರ್ಥ್ಯ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನ, ಅಂತರಿಕ್ಷಾ ತಂತ್ರಜ್ಞಾನ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪ್ರಭಾವವು ಹೆಚ್ಚುತ್ತಿದೆ ಎಂದು ಹೇಳಿದರು.
ಭಾರತೀಯರು ಬಹುರಾಷ್ಟ್ರೀಯ ಕಂಪನಿಗಳ ನಾಯಕತ್ವ ಹೊಂದಿರುವುದು, ಭಾರತೀಯರು ಜಗತ್ತನ್ನು ಮತ್ತೆ ಮುನ್ನಡೆಸುವ ಉತ್ಸಾಹ, ದೃಢ ನಿಶ್ಚಯ ಮತ್ತು ಪ್ರತಿಭೆ ಇರುವುದಕ್ಕೆ ಸಾಕ್ಷಿಯಾಗಿದೆ. ಈ ಗುರಿಯನ್ನು ಭಾರತ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ನಾಯಕತ್ವವನ್ನು ಗಳಿಸಬೇಕಾದರೆ, ನಾವು ನೀಡುವ ಶಿಕ್ಷಣ ಸೃಜನಶೀಲತೆ, ನವೋತ್ಪಾದನೆ ಮತ್ತು ಉತ್ತಮ ಮೌಲ್ಯ ಬೆಳೆಸುವತ್ತ ಗಮನಹರಿಸಬೇಕು ಹಾಗೂ ಒತ್ತು ನೀಡಬೇಕು ಎಂದರು.
 ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡಿ ಶಿಕ್ಷಣವನ್ನು ರೂಪಾಂತರಿಸಬೇಕು. ಈ ಮೂಲಕ ಯುವಜನತೆಯನ್ನು ಶಕ್ತಿಶಾಲಿಗಳನ್ನಾಗಿಸಿ ಭವ್ಯವಾದ ರಾಷ್ಟ್ರ ಕಟ್ಟಬಹುದು ಎಂದು ಹೇಳಿದರು.
 ಮಹಾಜನ ವಿದ್ಯಾಸಂಸ್ಥೆಯ ಗೌ. ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮೀ ಮುರಳೀಧರ್, ಶೈಕ್ಷಣಿಕ ಸಲಹೆಗಾರ ಡಾ. ಎಸ್.ಆರ್. ರಮೇಶ್, ಪ್ರಾಂಶುಪಾಲೆ ಡಾ. ಬಿ.ಆರ್.ಜಯಕುಮಾರಿ ಉಪಸ್ಥಿತರಿದ್ದರು.