ನಂಜನಗೂಡಿನಲ್ಲಿ ಸೋಮವಾರ ಆಯೋಜಿಸಿದ್ದ ಸಿರಿಗನ್ನಡ ವೇದಿಕೆಯ 9ನೇ ವಾರ್ಷಿಕೋತ್ಸವ, ಕವಿಗೋಷ್ಠಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಡಾ.ಕೃ.ಪಾ.ಮಂಜುನಾಥ್ ಉದ್ಘಾಟಿಸಿದರು. ಬಸವರಾಜು, ನಂಜನಗೂಡು ಸತ್ಯನಾರಾಯಣ, ಡಾ. ಸೌಗಂಧಿಕಾ ಜೋಯಿಸ್, ಶೋಭಾ ನಾಗಶಯನ ಇತರರು ಇದ್ದರು.
- ಡಾ.ಕೃ.ಪಾ.ಮಂಜುನಾಥ್ ಸಲಹೆ
- ಸಿರಿಗನ್ನಡ ವೇದಿಕೆಯ 9ನೇ ವಾರ್ಷಿಕೋತ್ಸವ
ನಂಜನಗೂಡು: ಭಾಷೆಯನ್ನು ಸ್ಪಷ್ಟವಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಪದಗಳು ಅಪಭ್ರಂಶಗೊಂಡು ಅರ್ಥ ಕಳೆದುಕೊಳ್ಳುತ್ತವೆ ಎಂದು ಮೈಸೂರಿನ ಸದ್ವಿದ್ಯಾ ಶಾಲೆ ಉಪನ್ಯಾಸಕ ಡಾ. ಕೃ.ಪಾ.ಮಂಜುನಾಥ್ ಹೇಳಿದರು.
ನಗರದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಿರಿಗನ್ನಡ ವೇದಿಕೆಯ 9ನೇ ವಾರ್ಷಿಕೋತ್ಸವ, ಕವಿಗೋಷ್ಠಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬೆಳ್ಳಿಯ ಉಳಿ ಎಂಬ ಪದ ಬೆಳ್ಳುಳ್ಳಿಯಾದ ಕಥೆ ಹೇಳಿದರು. ಕವಿಗಳು ಕಿವಿಗಳಾಗಬೇಕು ಅಂದರೆ ಇನ್ನೊಬ್ಬರು ಕವಿಗಳು ವಾಚನ ಮಾಡುವುದನ್ನು ಕೇಳಬೇಕು. ಜತೆಗೆ ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ಬಿಆರ್‌ಸಿ ಬಸವರಾಜು ಮಾತನಾಡಿ, ವಿವೇಕ ತುಂಬಿದ ವಿದ್ಯೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮೊಬೈಲ್ ಗೀಳಿನಿಂದ ಹೊರಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೊರಳವಾಡಿ ಹೊಸೂರು, ಹಂಡುವಿನಹಳ್ಳಿ, ಸುಜಾತಪುರಂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು.
ಸಂಘಟನೆ ಗೌರವಾಧ್ಯಕ್ಷರಾದ ಡಾ.ಸೌಗಂಧಿಕಾ ಜೋಯಿಸ್, ಕವಯಿತ್ರಿ ಶೋಭಾ ನಾಗಶಯನ, ಶ್ರೀಕಾಂತ್ ಹಾಗೂ ಮಹೇಶ್, ಮಹೇಶ್ ಕೃಷ್ಣಮೂರ್ತಿ, ಸಿರಿಗನ್ನಡ ವೇದಿಕೆಯ ಚೇತನ್ ಶರ್ಮ, ನಂಜನಗೂಡು ಸತ್ಯನಾರಾಯಣ, ನಂಜನಗೂಡಿನ ಶ್ರೀಪತಿ, ರವಿಕುಮಾರ್, ಮಹಾದೇವ ಪ್ರಸಾದ್, ಗೋಳೂರು ನಾರಾಯಣಸ್ವಾಮಿ, ಮಹೇಶ್ವರಿ, ಮುಳ್ಳೂರು ಶಿವಕುಮಾರ್, ಚೇತನ್, ಪ್ರವೀಣ್ ಕುಮಾರ್, ಚಿನ್ನಸ್ವಾಮಿ, ರಿತೇಶ್ ಅರಸ್ ಇತರರು ಇದ್ದರು.