ಸಾಲಿಗ್ರಾಮ ಸಮೀಪದ ಸಂಕನಹಳ್ಳಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಎನ್‌ಎಸ್‌ಎಸ್ ಶಿಬಿರವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಪ್ರಾಂಶುಪಾಲ ಗೋವಿಂದೇಗೌಡ, ರಾಜೇಶ್, ಸಿ.ಪಿ.ರಮೇಶ್ ಇದ್ದರು. 
ಮೈಸೂರು

ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಲಿ

ಲೋಕೇಶ್ ಮನು. ಡಿ
ಸಾಲಿಗ್ರಾಮ: ಸಿಗುವ ಅತ್ಯಮೂಲ್ಯ ದಿನಗಳಲ್ಲಿ ವಿದ್ಯಾರ್ಥಿಗಳು ಓದುವುದರ ಕಡೆ ಗಮನಹರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ಸಾಲಿಗ್ರಾಮ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸಂಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರ ಕಾಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಬದುಕಿನ ಅರಿವು ಇರಬೇಕು. ಗ್ರಾಮೀಣ ಜನರಲ್ಲಿ ಸಾಕಷ್ಟು ವಿಷಯಗಳು ಅಡಗಿದ್ದು, ಅವುಗಳನ್ನು ತಿಳಿದರಷ್ಟೇ ನಿಮ್ಮ ಜೀವನ ಯಶಸ್ಸು ಕಾಣಲು ಸಾಧ್ಯ ಎಂದರು.
ಸಂಕನಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದ ಸಾಕಷ್ಟು ವಿಷಯಗಳನ್ನು ತಿಳಿದ ಜನರು ಇರುವುದರಿಂದ ಆ ವಿಷಯಗಳನ್ನು ತಿಳಿದರೆ ನಿಮ್ಮ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಜತೆಗೆ ಜನರೊಂದಿಗೆ ನಿಮ್ಮ ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಎನ್‌ಎನ್‌ಎಸ್ ಶಿಬಿರವನ್ನು ಯಶಸ್ವಿಗೊಳಿಸಬೇಕು. ನೀವು ಒಂದಷ್ಟು ದಿನ ಗ್ರಾಮಗಳಲ್ಲಿದ್ದ ದಿನಗಳು, ಮಾಡಿದ ಸ್ವಚ್ಛತೆ, ಗಳಿಸಿದ ಪ್ರೀತಿ, ವಿಶ್ವಾಸ ಕೊನೆತನಕ ಉಳಿಯಲಿದೆ ಎಂದರು.
ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್ ಮಾತನಾಡಿ, ಶರಣರು ಹೇಳಿರುವಂತೆ ಸಾಂಸ್ಕೃತಿಕ ಮತ್ತು ದಾಸೋಹ ವಿಷಯಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಲ್ಲೂ ಇರಬೇಕು. ವಿದ್ಯಾರ್ಥಿಗಳ ಒಗ್ಗಟ್ಟಿನ ಸಂಘಟನೆ ಮುಂದೆ ಯಾವುದೂ ಮೇಲು, ಕೀಳು ನಿಲ್ಲದು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಗೋವಿಂದೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ. ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಶಿಬಿರದ ಕಾರ್ಯಕ್ರಮಗಳನ್ನು ಜನರಿಗೆ ಮನದಟ್ಟು ಮಾಡುವ ಜತೆಗೆ ನಿಮ್ಮ ಜೀವನಕ್ಕೆ ಬೇಕಿರುವ ವಿಷಯಗಳನ್ನು ಅರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಮಧು ಎಚ್.ಎಸ್., ಡಾ.ಸುವರ್ಣ, ಡಾ.ರಾಜೇಶ ಎ.ಎಸ್., ಶ್ರೀನಿವಾಸ್ ಎಂ., ಮಂಜುನಾಥ್, ಡಾ.ಗಾಯಿತ್ರಮ್ಮ, ಬ್ರಿಜೇಶ್, ಶಿಕ್ಷಕರಾದ ಭೇರ್ಯ ಮಹೇಶ್, ಚಂದ್ರಶೇಖರ ಕೆ.ಬಿ., ಗ್ರಾಮದ ಮುಖಂಡರಾದ ಮಹೇಂದ್ರ, ನಾಗೇಂದ್ರ, ಆನಂದ್, ಭಾರತಿ ವಿಶ್ವನಾಥ್, ರಾಜಣ್ಣ, ನಂಜಪ್ಪ, ಧರ್ಮ ಇದ್ದರು.