ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲಿನಲ್ಲಿರುವ ಗಳಿಗೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳಿಗೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಸಾಲದ ಚೆಕ್ ವಿತರಿಸಿದರು. ಕುಮಾರ್, ಎಂ.ಎಸ್.ಮಹದೇವ್, ರಾಮಕೃಷ್ಣೇಗೌಡ, ಮಧುಕಿರಣ್, ರಾಜೇಗೌಡ, ರೇವಣ್ಣ, ರಾಜೇಶ್ವರಿ, ವೇದಾವತಿ ಇತರರು ಇದ್ದರು.
ಕೆ.ಆರ್.ನಗರ: ಜಿಲ್ಲಾ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ದೊಡ್ಡಕೊಪ್ಪಲಿನಲ್ಲಿರುವ ಗಳಿಗೆಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಬ್ಯಾಂಕ್ ನಿಗದಿ ಮಾಡಿರುವಂತೆ ಕಂತುಗಳ ಮೂಲಕ ಹಣ ಮರು ಪಾವತಿ ಮಾಡಬೇಕು ಎಂದರು.
ಈ ಸಂಘಕ್ಕೆ ಒಳಪಡುವ 14 ಸ್ವಸಹಾಯ ಸಂಘಗಳಿಗೆ 2026-26ನೇ ಸಾಲಿನಲ್ಲಿ 1.44 ಕೋಟಿ ರೂ. ಬಿಡುಗಡೆಯಾಗಿದ್ದು, ತಲಾ 1 ಸಂಘಕ್ಕೆ 10 ಲಕ್ಷ ರೂ.ನಂತೆ ಸಾಲ ನೀಡಲಾಗಿದೆ. ಮಹಿಳೆಯರು ಈ ಹಣವನ್ನು ಹೈನುಗಾರಿಕೆ ಸೇರಿದಂತೆ ಇತರ ವ್ಯವಹಾರಕ್ಕೆ ಬಳಸಿ ಲಾಭಗಳಿಸಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ವಿತರಿಸುವ ಕೆಸಿಸಿ ಸಾಲವನ್ನು ಈ ಬಾರಿಯಿಂದ ಹೊಸ ರೈತ ಸದಸ್ಯರಿಗೂ ನೀಡುತ್ತಿದ್ದು, ಈ ಸಂಘದ ವತಿಯಿಂದ ಒಟ್ಟು 10 ಕೋಟಿ ರೂ. ನೀಡಲಾಗಿದೆ. ಕೆಸಿಸಿ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದರ ಜತೆಗೆ ವಾಹನ ಖರೀದಿ ಹಾಗೂ ಕೃಷಿಪರಿಕರ ಖರೀದಿ ಮಾಡಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದರ ಜತೆಗೆ ಚಿನ್ನಾಭರಣ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ಸಾರ್ವಜನಿಕರು ಇದನ್ನು ಉಪಯೋಗಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.
ಈ ಬಾರಿ ಎರಡು ಜಿಲ್ಲೆಗಳಿಂದ 1,400 ಕೋಟಿ ರೂ.ಹಾಗೂ ವ್ಯವಸಾಯೇತರವಾಗಿ 600 ಕೋಟಿ ರೂ. ಸಾಲ ನೀಡಲಾಗಿದೆ. 1 ಸಾವಿರ ಕೋಟಿ ರೂ. ಠೇವಣೆ ಇರಿಸಲಾಗಿದೆ. ಮತ್ತಷ್ಟು ಠೇವಣೆ ಸಂಗ್ರಹಿಸಬೇಕು. ನಮ್ಮ ಎಂಸಿಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ 31 ಶಾಖಾ ಬ್ಯಾಂಕ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಸಾಲದ ಹಣ ನೇರವಾಗಿ ಖಾತೆಗೆ ಜಮಾ ಆಗುವುದರಿಂದ ಅವ್ಯವಹಾರ ಅಸಾಧ್ಯ ಎಂದು ತಿಳಿಸಿದರು.
ಸಹಕಾರ ಸಂಘಗಳಿಂದ ಪಡೆದದತಂಹ ಸಾಲ ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ಸದಸ್ಯರು ಸುಸ್ತಿದಾರರಾಗುತ್ತಾರೆ. ಇದರಿಂದ ಸಂಘವು ನಷ್ಟಕ್ಕೆ ಒಳಗಾಗಲಿದೆ. ಅದಕ್ಕಾಗಿ ಈ 2 ಜಿಲ್ಲೆಯ ಒಟ್ಟು 4,17 ಸಂಘಗಳಲ್ಲಿ ಸುಸ್ತಿದಾರರಿಲ್ಲದಂತೆ ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿ 24 ಸಂಘಗಳ ಪೈಕಿ 4 ಸಂಘಗಳು ಸುಸ್ತಿದಾಯಾಗಿದ್ದು, ಇದನ್ನು ಶೀಘ್ರದಲ್ಲಿ ಸರಿಪಡಿಸಲು ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳು ಮತ್ತು ಸಂಘದ ಸಿಇಓಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂಘದ ಶತಮಾನೋತ್ಸವ ಭವನ ನಿರ್ಮಾಣವಾಗಿದ್ದರು ಸೂಕ್ತ ಅಡಿಗೆ ಮನೆ ಊಟದ ಹಾಲ್ ಇಲ್ಲದೆ ಅನುಕೂಲವಾಗುತ್ತಿಲ್ಲವೆಂದು ನೀವು ಮಾಡಿರುವ ಮನವಿ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಮಾರ್, ನಿರ್ದೇರ್ಶಕರಾದ ಎಂ.ಎಸ್.ಮಹದೇವ್, ರಾಮಕೃಷ್ಣೇಗೌಡ, ಮಧುಕಿರಣ್, ರಾಜೇಗೌಡ, ರೇವಣ್ಣ, ರಾಜೇಶ್ವರಿ, ವೇದಾವತಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಟಿ.ಉಮೇಶ್, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಪ್ರಶಾಂತ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮೋಹನರಾಜ್, ಸಂಘದ ಸಿಇಒ ಪುಟ್ಟೇಗೌಡ, ಕಾಂಗ್ರೆಸ್ ಸಹಕಾರ ಸಮಿತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸಂಪತ್ತೇಗೌಡ, ಮುಖಂಡರಾದ ಹರಿರಾಜ್, ಮಹದೇವ್, ರಾಜೇಗೌಡ, ಬೋರನಾಯಕ ಇತರರು ಇದ್ದರು.