ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಸ್ತಾರ ಫೆಸ್ಟ್ ಸಮಾರೋಪ ಕಾರ್ಯಕ್ರಮದಲ್ಲಿ ಮಂಡ್ಯ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು. 
ಮೈಸೂರು

ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಲಿ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿಕೆ
ಮೈಸೂರು: ಸಮಾಜದಲ್ಲಿ ಅವೈಜ್ಞಾನಿಕವಾದ ನಂಬಿಕೆ ನಿವಾರಿಸಲು ವಿಜ್ಞಾನ ಅವಶ್ಯವಾಗಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಸ್ತಾರ 2026 ಫೆಸ್ಟ್ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಕಂಡುಕೊಳ್ಳಬೇಕು. ಮಾನವನ ಜೀವನದ ಅನುಭವವನ್ನು ತಂತ್ರಜ್ಞಾನ ತುಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ಇಂತಹ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ದೃಷ್ಟಿಯನ್ನು ಬೆಳೆಸುತ್ತವೆ. 
ಫಲಿತಾಂಶಗಳನ್ನು ನಿರೀಕ್ಷಿಸದೆ ಶ್ರದ್ಧೆಯಿಂದ ಭಾಗವಹಿಸಬೇಕು. ರಾಜ್ಯ ಮಟ್ಟದ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ.ಮಂಟೇಲಿಂಗು ಮಾತನಾಡಿ, ಜೀವನ ಉತ್ತಮಗೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನದ ಗುರುತರ ಪಾತ್ರವಿದೆ.
 ವಿಜ್ಞಾನವಿಲ್ಲದೆ ಯಾವುದಕ್ಕೂ ಅರ್ಥವಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ಕುತೂಹಲ ಬಹಳ ಮುಖ್ಯ ಎಂದರು. 
ಪ್ರಾಂಶುಪಾಲ ಡಾ.ರೇಚಣ್ಣ, ವಿಸ್ತಾರ ಫೆಸ್ಟ್‌ನ ಸಂಚಾಲಕ ಡಿ.ಬಿ.ಯಶ್ವಂತ್, ಸಹ ಸಂಚಾಲಕಿ ರಾಜೇಶ್ವರಿ ಉಪಸ್ಥಿತರಿದ್ದರು.