ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ವಿ.ವಿಜಯಕುಮಾರ್ ನಾಗನಾಳ, ಜಿ.ಎಸ್.ಶಿವಸ್ವಾಮಿ, ವಿಕಾಸ್ ಶಾಸ್ತ್ರಿ, ಆಶಾ ಇತರರು ಇದ್ದರು.
- ಯೋಜನೆಗಳು ಮಹಿಳೆಯರಿಗೆ ಇದು ತಲುಪುವಂತೆ ನೋಡಿಕೊಳ್ಳಬೇಕು
- ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರಹೆಗ್ಗಡೆ, ಹೇಮಾವತಿ ಅವರ ಮಾರ್ಗದರ್ಶನದಲ್ಲಿ ಟ್ರಸ್ಟ್ ಶ್ರಮಿಸುತ್ತಿದೆ
ಮೈಸೂರು:ಜ್ಞಾನ ವಿಕಾಸ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಅವಶ್ಯಕವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಹಿರಿಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮಾಭಿವೃದ್ಧಿಗಾಗಿ ಅದರಲ್ಲಿಯೂ ಮಹಿಳೆಯರ ಸಬಲೀಕರಣಕ್ಕಾಗಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರಹೆಗ್ಗಡೆ, ಹೇಮಾವತಿ ಅವರ ಮಾರ್ಗದರ್ಶನದಲ್ಲಿ ಟ್ರಸ್ಟ್ ಶ್ರಮಿಸುತ್ತಿದೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರಿಗೆ ಇದು ತಲುಪುವಂತೆ ನೋಡಿಕೊಳ್ಳಬೇಕು. ಜ್ಞಾನ ವಿಕಾಸವೂ ಇದರ ಒಂದು ಭಾಗವಾಗಿದ್ದು, ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಗೆ ವಿವಿಧ ವಿಷಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.
ಹಿರಿಯ ವಕೀಲ ಜಿ.ಎಸ್.ಶಿವಸ್ವಾಮಿ ಅವರು ಮಹಿಳೆಯರ ಕಾನೂನು ಮತ್ತು ಹಕ್ಕು ಕುರಿತು ವಿವರಿಸಿದರಲ್ಲದೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ ತಿಳಿಸಿದ ಸಾಮಾಜಿಕ ಕಾರ್ಯಕರ್ತ ವಿಕಾಸ್ ಶಾಸ್ತ್ರಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ ಸುಳಿಯಲ್ಲಿ ಸಿಲುಕದ ಹಾಗೆ ಉಪಯೋಗ, ಸವಾಲುಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಯನಗರ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಆಶಾ ಅವರು, ಕೇಂದ್ರದಿಂದ ಅದ ಬದಲಾವಣೆ, ಸಂಪನ್ಮೂಲ ವ್ಯಕ್ತಿಗಳಿಂದ ಪಡೆದುಕೊಂಡ ಉಪಯುಕ್ತ ಮಾಹಿತಿ, ಕುಟುಂಬದಲ್ಲಿ ತಾಯಿಯ ಮಹತ್ವದ ಪಾತ್ರ, ಮಹಿಳೆಯರಿಗೆ ಅನುಕೂಲ ಕುರಿತು ಅಭಿಪ್ರಾಯ ಹಂಚಿಕೊಂಡರು.
ತಾಲೂಕಿನ ಯೋಜನಾಧಿಕಾರಿಗಳು, ಮೇಲ್ವಿಚಾರಕರ ವರ್ಗ, ಜ್ಞಾನವಿಕಾಸ ಸಂಯೋಜಕಿಯರು, ಕೇಂದ್ರದ ಸದಸ್ಯರು ಇದ್ದರು. ಕೇಂದ್ರದ ಸದಸ್ಯರಿಗೆ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.