ಆಕಾಶವಾಣಿ ಮೈಸೂರು ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಉದ್ಘಾಟಿಸಿದರು. ಡಾ.ಲತಾ, ಎನ್.ಎಂ.ನಂದೀಶ್ ಕುಮಾರ್, ಎನ್.ಕೇಶವಮೂರ್ತಿ ಇದ್ದರು. 
ಮೈಸೂರು

ಮಕ್ಕಳ ಮೊದಲ ಕಲಿಕಾ ಭಾಷೆ ಕನ್ನಡವಾಗಲಿ: ಡಾ.ಕೆ.ಎಂ.ವಸುಂಧರಾ ಇಂಗಿತ

ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸಬೇಕು ಎಂದು ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ಮಕ್ಕಳ ಮೊದಲ ಕಲಿಕೆಯ ಭಾಷೆಯಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾತ್ರವಲ್ಲದೆ, ಶಾಲೆಗಳು ಮತ್ತು ಪಾಲಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಹೇಳಿದರು.

ಮೈಸೂರು: ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸಬೇಕು ಎಂದು ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ಮಕ್ಕಳ ಮೊದಲ ಕಲಿಕೆಯ ಭಾಷೆಯಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಾತ್ರವಲ್ಲದೆ, ಶಾಲೆಗಳು ಮತ್ತು ಪಾಲಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಹೇಳಿದರು.

ಆಕಾಶವಾಣಿ ಮೈಸೂರು ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಜೀವನಶೈಲಿಯಲ್ಲಿ ಉದ್ಯೋಗಸ್ಥ ತಾಯಂದಿರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ದಿನದ ಏಳರಿಂದ ಎಂಟು ಗಂಟೆಗಳ ಕಾಲ ಕಳೆಯುವ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ವಿಶೇಷ ಆದ್ಯತೆ ನೀಡಬೇಕು. ಕನಿಷ್ಠ ಐದನೇ ತರಗತಿಯವರೆಗೆ ಮಕ್ಕಳಿಗೆ ಸರಳ, ಸ್ಪಷ್ಟ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ರೂಪಿಸಬೇಕು ಎಂದರು.

ಕನ್ನಡ ಕಲಿಕೆ ಮಕ್ಕಳಿಗೆ ಹೊರೆಯಾಗದೆ, ಭಾಷೆಯ ಬಗ್ಗೆ ಪ್ರೀತಿ ಮೂಡಿಸುವಂತಿರಬೇಕು. ಬೇರೆ ದೇಶಗಳು ತಮ್ಮ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಬೆಳವಣಿಗೆ ಸಾಧಿಸಿವೆ. ನಮ್ಮ ಮಕ್ಕಳಿಗೂ ಕನ್ನಡದ ಶ್ರೇಷ್ಠತೆ ಪರಿಚಯಿಸಿದಾಗ ಮಾತ್ರ ಮುಂದಿನ ಪೀಳಿಗೆ ಕನ್ನಡವನ್ನು ಕಲಿಯುತ್ತವೆ, ಮಾತನಾಡುತ್ತವೆ ಮತ್ತು ಬಳಸುತ್ತವೆ. ಆ ಮೂಲಕ ಭಾಷೆಯ ಉಳಿವು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಕನ್ನಡ ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆಗಳ ಪೈಕಿ ಕನ್ನಡವೂ ಪ್ರಮುಖ ಸ್ಥಾನದಲ್ಲಿದೆ. ಇಂತಹ ಶ್ರೀಮಂತ ಭಾಷೆಯ ಸೌಂದರ್ಯ, ಸಾಹಿತ್ಯ ಪರಂಪರೆ ಮತ್ತು ವೈಶಿಷ್ಟೃವನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.

ನಾವು ಕೇಳುವ ಸಂಸ್ಕೃತಿಯ ಮೂಲಕ ಬೆಳೆದವರು. ದೂರದರ್ಶನದ ಆಗಮನಕ್ಕೂ ಮುನ್ನವೇ ಆಕಾಶವಾಣಿ ಜನರ ಮನೆಮನಗಳನ್ನು ತಲುಪಿತ್ತು. ಉಪನ್ಯಾಸ, ಸಂವಾದ, ನಾಟಕ, ಚಿಂತನ-ಮಂಥನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಲಿಸುತ್ತಲೇ ಜ್ಞಾನ ಸಂಪಾದಿಸಿದ ತಲೆಮಾರು ನಮ್ಮದು. ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ವ್ಯಾಸಂಗ ಮಾಡುವಾಗ ಯುವವಾಣಿಯಲ್ಲಿ ಕಾರ್ಯಕ್ರಮ ನೀಡುವ ಅವಕಾಶ ದೊರೆತಿತ್ತು. ವಿದ್ಯಾರ್ಥಿ ಜೀವನದಲ್ಲಿ ಜಂಬೂಸವಾರಿ ನಿರೂಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ. ಸರ್ಕಾರಿ ಸೇವೆಗೆ ಸೇರಿದ ಬಳಿಕವೂ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕಥೆ ಮತ್ತು ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧ ಮುಂದುವರಿದಿದೆ ಎಂದರು.

ಆಕಾಶವಾಣಿ ಎಂಬುದು ಕೇವಲ ಪ್ರಸಾರ ಮಾಧ್ಯಮವಲ್ಲ. ಅದು ಜನರ ಭಾವನೆ ಮತ್ತು ಬದುಕಿನೊಂದಿಗೆ ಬೆಸೆದುಕೊಂಡಿರುವ ಬಾಂಧವ್ಯ. ಹಿಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಆಕಾಶವಾಣಿಯ ಕಾರ್ಯಕ್ರಮಗಳಿಗೆ ವಿಶೇಷ ಸ್ಥಾನವಿತ್ತು. ಬೆಳಗಿನ ಸುದ್ದಿ, ನಾಡಿನ ವಿದ್ಯಮಾನಗಳು, ನಾಟಕಗಳು ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ಕೇಳುತ್ತಲೇ ಅನೇಕರು ಬೆಳೆದಿದ್ದಾರೆ. ಆಕಾಶವಾಣಿಯ ಧ್ವನಿಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಹೀಗಾಗಿ ಆಕಾಶವಾಣಿಯೊಂದಿಗಿನ ಸಂಬಂಧವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಆಕಾಶವಾಣಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದರೂ ಅದರ ಮಹತ್ವ ಕಡಿಮೆಯಾಗಿಲ್ಲ. ಖಾಸಗಿ ಎಫ್‌ಎಂ ವಾಹಿನಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಆಕಾಶವಾಣಿಯ ವಿಶಿಷ್ಟತೆ ಮತ್ತು ವಿಶ್ವಾಸಾರ್ಹತೆಯನ್ನು ಜನರಿಗೆ ಪರಿಚಯಿಸಬೇಕು. ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಗಳಲ್ಲಿ ಸತ್ಯಾಸತ್ಯತೆಗೆ ಆದ್ಯತೆ ಇರುತ್ತದೆ. ಕನ್ನಡದ ಸ್ಪಷ್ಟ ಉಚ್ಚಾರಣೆ, ಭಾಷಾ ಸೌಂದರ್ಯ ಮತ್ತು ಗುಣಮಟ್ಟದ ಸಂವಹನಕ್ಕೆ ಇಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಕಲಾವಿದರನ್ನು ಆಯ್ಕೆ ಮಾಡುವಾಗಲೂ ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಆಕಾಶವಾಣಿಯ ಮೇಲಿನ ಜನರ ವಿಶ್ವಾಸವನ್ನು ಉಳಿಸಿ ಬೆಳೆಸಬೇಕು ಎಂದರು.

ಆಕಾಶವಾಣಿಯ ಸಂಗ್ರಹಾಲಯ ಅಮೂಲ್ಯ ಧ್ವನಿ ಸಂಪತ್ತಿನ ಭಂಡಾರವಾಗಿದೆ. ಹಿರಿಯ ಕಲಾವಿದರು, ಸಾಹಿತಿಗಳು ಹಾಗೂ ಸಾಧಕರ ಧ್ವನಿಮುದ್ರಿಕೆಗಳು ನಮ್ಮ ಸಾಂಸ್ಕೃತಿಕ ಇತಿಹಾಸದ ಅಮೂಲ್ಯ ದಾಖಲೆಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕು. ಆಕಾಶವಾಣಿಯ ಕೇಳುಗರ ಸಂಖ್ಯೆಯೂ ಹೆಚ್ಚಾಗಬೇಕು ಎಂದರು.

ಇಂದು ಬೆಂಗಳೂರು ನಗರದಲ್ಲಿ ಕನ್ನಡದಲ್ಲಿ ಮಾತನಾಡುವವರನ್ನು ಇಂಗ್ಲಿಷ್‌ನಲ್ಲಿ ಸಂವಹನ ನಡೆಸಲು ಬಾರದವರು, ಸಾಮರ್ಥ್ಯವಿಲ್ಲದವರು ಎಂಬಂತೆ ನೋಡುವ ಮನೋಭಾವ ಬದಲಾಗಬೇಕು. ಇಂಗ್ಲಿಷ್ ಮಾತನಾಡಿದರೆ ಮಾತ್ರ ಗೌರವ ಮತ್ತು ಸ್ಥಾನಮಾನ ಸಿಗುತ್ತದೆ ಎಂಬ ಭಾವನೆ ಸರಿಯಲ್ಲ ಎಂದರು.

ಕನ್ನಡ ಕಟ್ಟು ಕೆಲಸಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕನ್ನಡದಲ್ಲಿಯೂ ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಸಂವಹನ ನಡೆಸಬಹುದು. ಅಗತ್ಯವಿರುವ ಸಂದರ್ಭಗಳಲ್ಲಿ ಇತರ ಭಾಷೆಗಳನ್ನು ಬಳಸುವುದಕ್ಕೆ ಆಕ್ಷೇಪವಿಲ್ಲ. ಆದರೆ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಮೈಸೂರು ಶಾರದಾ ಆಯುರ್ವೇದ ಚಿಕಿತ್ಸಾಲಯದ ಹಿರಿಯ ಸಲಹೆಗಾರ್ತಿ ಡಾ.ಲತಾ, ಮಸ್ಟ್ ಈಟ್ ಮಶ್ರುಮ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ.ನಂದೀಶ್ ಕುಮಾರ್, ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಎನ್.ಕೇಶವಮೂರ್ತಿ ಇದ್ದರು.