- ಶಾಸಕ ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಸಲಹೆ
- ತಂತ್ರಗಾರಿಕೆ, ಅವಕಾಶವಾದಿ ರಾಜಕಾರಣ ಬಿಡಲಿ
ಶಾಸಕ ಜಿ.ಟಿ. ದೇವೇಗೌಡರು ತಂತ್ರಗಾರಿಕೆ, ಅವಕಾಶವಾದಿ ರಾಜಕಾರಣವನ್ನು ಬಿಡಬೇಕು. ಅವರು ಮಾಡಿದ ತಪ್ಪನ್ನು ತಿದ್ದುಕೊಂಡು ಪಕ್ಷದಲ್ಲೇ ಉಳಿಯುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಜಿ.ಟಿ ದೇವೇಗೌಡ ಭೇಟಿಯಾಗಿ ಶುಭಕೋರಿದ ವಿಚಾರ ಮತ್ತು 2028ಕ್ಕೆ ಜೆಡಿಎಸ್‌ನಿಂದಲೇ ಸ್ಪರ್ಧೆ ಎಂಬ ಹೇಳಿಕೆ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರಿಗೆ ಜಿ.ಟಿ.ದೇವೇಗೌಡರ ಮೇಲೆ ನಂಬಿಕೆ ಬಂದು ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೂ ನಮ್ಮ ಅಭ್ಯಂತರ ಇಲ್ಲ ಎಂದರು.
ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ದೇವೇಗೌಡ, ರಾಜ್ಯ ನಾಯಕ ಕುಮಾರಸ್ವಾಮಿ. ಮೈಸೂರು ಜಿಲ್ಲೆಗೆ ಜಿ.ಟಿ.ದೇವೇಗೌಡ ಏಕೈಕ ನಾಯಕರು ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಉಪಚುನಾವಣೆಯಲ್ಲಿ ಒಂದು ರೀತಿ, ವಿಧಾನಸಭೆಯಲ್ಲಿ ಒಂದು ರೀತಿ, ಮಹಾನಗರಪಾಲಿಕೆಯಲ್ಲಿ ಒಂದು ತೀರ್ಮಾನ, ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಯೂನಿಯನ್ ನಲ್ಲಿ ಒಂದು ತೀರ್ಮಾನ ಮಾಡಿಕೊಂಡು ಬಂದಿದ್ದಾರೆ. ಅವರ ಈ ನಡೆಯೇ ಎಲ್ಲರಿಗೂ ಬೇಸರ ತರಿಸಿದೆ. ಇದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ ಎಂದರು.
ಜಿ.ಟಿ. ದೇವಗೌಡರು ಎಚ್.ಡಿ. ದೇವೇಗೌಡರನ್ನು ಭೇಟಿಯಾದ ಸಂದರ್ಭ ಒಬ್ಬೇ ಒಬ್ಬ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡ ಜತೆಯಲ್ಲಿ ಇರಲಿಲ್ಲ. ಬೇರೆ ಬೇರೆ ಕ್ಷೇತ್ರದ ಮುಖಂಡರನ್ನು ಕರೆದುಕೊಂಡು ಹೋಗಿದ್ದಾರೆ. ಜಿ.ಟಿ. ದೇವೇಗೌಡರಿಂದ ಪಕ್ಷಕ್ಕೆ ಬಹಳ ನಷ್ಟವಾಗಿದೆ ಎಂದು ದೂರಿದರು.
ಅವಕಾಶವಾದಿ ರಾಜಕಾರಣ ಬೇಡ:
ನಮ್ಮ ಜತೆ ಜಿಟಿಡಿ ಇಲ್ಲ ಅಂತ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಪಕ್ಷವೇ ನಮಗೆ ತಾಯಿ, ತಂದೆ ಇದ್ದಂತೆ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ತಪ್ಪು ತಿದ್ದುಕೊಂಡು ಬಂದರೆ, ನಮ್ಮ ನಾಯಕರು ಒಪ್ಪಿದರೆ ನಮ್ಮ ತಕರಾರು ಏನು ಇಲ್ಲ. ಆದರೆ, ಅವಕಾಶವಾದಿ ರಾಜಕಾರಣವನ್ನು ಬಿಡಬೇಕು ಎಂದು ಸಾ.ರಾ. ಮಹೇಶ್ ಹೇಳಿದರು.
ಪಕ್ಷಕ್ಕಿಂತ ನಮಗೆ ಯಾರೂ ದೊಡ್ಡವರಲ್ಲ. ಜಿ.ಟಿ. ದೇವೇಗೌಡರಿಗೆ ಪಕ್ಷ ಎಲ್ಲ ಕೊಟ್ಟಿತ್ತು. ಆದರೆ ಮೋಸ ಮಾಡಿದರು. ಹಾಗಾಗಿ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ. ಭಾನುವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾವೇಶವಿದೆ. ಆ ಕಾರಣ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಈ ಎಲ್ಲ ತಂತ್ರಗಳು ನಮಗೆ ಅರ್ಥವಾಗತ್ತದೆ ಎಂದು ಕುಟುಕಿದರು.