ನಗರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 30ನೇ ಸಂಗೀತ ಸಮ್ಮೇಳನವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಟಿ.ಎಸ್.ಸತ್ಯವತಿ, ಟಿ.ಎಸ್.ಶ್ರೀವತ್ಸ, ಸಿ.ಜೆ.ಬೆಟಸೂರಮಠ, ಎಸ್.ರಾಮಪ್ರಸಾದ್ ಇನ್ನಿತರರಿದ್ದರು 
ಮೈಸೂರು

ಕಲಾ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಪ್ರಯೋಗ ನಡೆಯಲಿ

ಪ್ರಮುಖ ಮುಖ್ಯಾಂಶಗಳು

  • 30ನೇ ಸಂಗೀತ ಸಮ್ಮೇಳನ
  • ಅಭಿಜಾತ ಕಲೆಗಳ ಅಸ್ಮಿತೆಯ ಉಳಿಸಿ
  • ಕಲೆಗಳ ಬೇರು ಭದ್ರಗೊಳಿಸಿ
  • ಸಮಚಿತ್ತ ಪ್ರಯೋಗದಿಂದ ಮಾತ್ರವೇ ಕಲೆಯ ಪರಮಪ್ರಯೋಜನ ದಾಟಿಸಲು ಸಾಧ್ಯ
ಮೈಸೂರು: ಭಾರತೀಯ ಸಂಸ್ಕೃತಿಯ ಸಾರವನ್ನು ಹೀರಿಕೊಂಡು ಹಸನಾಗಿ ಹಬ್ಬಿರುವ ಅಭಿಜಾತ ಕಲೆಗಳ ಅಸ್ಮಿತೆಯ ಉಳಿಸಿಕೊಳ್ಳುವ ಹೊಣೆಗಾರಿಕೆ ಇದೆ ಎಂದು ಸಮ್ಮೇಳನಾಧ್ಯಕ್ಷೆ ವಿದುಷಿ ಡಾ.ಟಿ.ಎಸ್.ಸತ್ಯವತಿ ಹೇಳಿದರು.
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸಂಸ್ಮರಣಾರ್ಥ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 30ನೇ ಸಂಗೀತ ಸಮ್ಮೇಳನದಲ್ಲಿ ಮಾತನಾಡಿದರು.
ಬೇರೆ ಪ್ರಭಾವಗಳಿಂದ ಸಂಸ್ಕೃತಿ ಬದಲಾದಂತೆ ಕಂಡರೂ ಅದರ ಸಾರವು ಅಳಿಯಲಾರದು. ಹಾಗೆಯೇ ಕಲೆಗಳನ್ನು ಉಳಿಸಿಕೊಳ್ಳುವ ಈ ಸಂದರ್ಭದಲ್ಲಿ ಕಾಳನ್ನು ಉಳಿಸಿಕೊಂಡು, ಜೊಳ್ಳನ್ನು ತೂರುವ ಮೂಲಕ ಸಾರತರವಾದುದನ್ನು ಮುಂದಿನ ಪೀಳಿಗೆಗೆ ಕಾಪಿಡುವ ಪ್ರಯತ್ನ ಮಾಡಬೇಕಿದೆ. ಕಲೆಗಳ ಬೇರು ಭದ್ರಗೊಳಿಸಬೇಕಿದೆ.
ಇಲ್ಲವಾದರೆ ಹೊರಗಿನ ಪ್ರಭಾವ, ಪ್ರಲೋಭನೆ, ಪ್ರಚೋದನೆಗಳ ಪ್ರವಾಹದಲ್ಲಿ ಕಲೆ ಕೊಚ್ಚಿಹೋಗುವ ಸಂಭವ ಇದೆ ಎಂದು ನುಡಿದರು.
ಹಳೆಯದೋ, ಹೊಸತೋ, ಸಂಪ್ರದಾಯವೋ, ಆಧುನಿಕವೋ ಎಂಬ ಮಾತುಗಳಿಂದ ಕಲಾಪ್ರಪಂಚ ಗೊಂದಲ ಗೂಡಾಗಿದೆ. ಇದು ಇಂದಿನ ಸಮಸ್ಯೆಯೂ ಅಲ್ಲ. ಹಿಂದೆಯೂ ಈಗಿನದಕ್ಕಿಂತ ಭಿನ್ನವಾಗಿರಲಿಲ್ಲ. ಕುಮಾರವ್ಯಾಸರು ಹೇಳಿದಂತೆ ‘ಮರದ ಬೇರು ಭದ್ರವಾದಷ್ಟೂ ಅದು ಎತ್ತರಕ್ಕೆ ಬೆಳೆಯಲು ಸಾಧ್ಯ. ಬೇರಿನ ಶಕ್ತಿಯೇ ಮರದ ಶಕ್ತಿ’. ಕಲೆಯೂ ಹಾಗೆಯೇ. ಕಲಾಪ್ರಕಾರವನ್ನು ಆಳವಾಗಿ ಅಧ್ಯಯನ ಮಾಡಬೇಕು. ಆದರೆ, ಕಲಾಸೌಂದರ್ಯಕ್ಕೆ, ಕಲೆಯ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರಯೋಗ ಪ್ರಯತ್ನಗಳು ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಪರಂಪರೆಯನ್ನರಿತ ಪಂಡಿತರು ಆಧುನಿಕತೆಗೆ ಒತ್ತಾಸೆಯಾಗಿ ನಿಂತು ಮಾರ್ಗದರ್ಶನ ಮಾಡಿದರೆ ಕಲೆಯ ಬೇರಿಗೆ ಕೊಡಲಿ ಪೆಟ್ಟು ಬೀಳುವ ಭಯ ತಪ್ಪುತ್ತದೆ. ಸಂಪ್ರದಾಯದ ವಿಷಯದಲ್ಲಿ ವಿವೇಕದಿಂದ, ಆಧುನಿಕತೆಯ ವಿಷಯದಲ್ಲಿ ಸಹಾನೂಭೂತಿಯಿಂದ ವರ್ತಿಸಬೇಕಿದೆ. ‘ಸಂಪ್ರದಾಯಕ್ಕೆ ಜಿಗುಟುತನ, ಆಧುನಿಕತೆಗೆ ಅಹಂಕಾರ ಇದೆ’ ಎಂಬ ಚಿಂತಕರ ಮಾತು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಪರಂಪರೆಯ ಪ್ರತಿಮೆಗೆ ಆಧುನಿಕತೆಯ ಅಲಂಕಾರ ಮಾಡುವಂತಹ ಪ್ರಯೋಗಗಳು ಶಾಸ್ತ್ರೀಯ ಸಂಗೀತ ಮತ್ತು ನೃತ್ಯಪ್ರಕಾರಗಳಲ್ಲಿ ಹಿಂದೆಯೂ ಯಶಸ್ಸಿಯಾಗಿ ನಡೆದಿವೆ. ಆದರೆ, ಪ್ರಯೋಗಗಳ ಸಾಮರಸ್ಯವನ್ನು ಕಂಡುಕೊಳ್ಳಲು ರಸಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಕೆಲಗಳಲ್ಲಿರುವ ಈಗಿನ ಮೋಸದ ಪೈಪೋಟಿಯನ್ನು ಅಳಿಸಿ, ಸಾಮರಸ್ಯದ ರಸಪಾಕವನ್ನು ಸವಿಯಬೇಕು. ಎಲ್ಲದರ ಸಮಚಿತ್ತ ಪ್ರಯೋಗದಿಂದ ಮಾತ್ರವೇ ಕಲೆಯ ಪರಮಪ್ರಯೋಜನ ದಾಟಿಸಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ವೈರುಧ್ಯ ಮತ್ತು ಬಹುತ್ವದ ಭಾರತವನ್ನು ಒಗ್ಗೂಡಿಸಲು ಶಕ್ತಿ ಸಂಗೀತ ಕಲೆಗಿದೆ. ಧರ್ಮ-ಜಾತಿಗಳನ್ನು ಮೀರಿ ಬೆಳೆದಿರುವ ಈ ಕಲೆಯು, ಮನುಕುಲದ ಸಂದೇಶ ಸಾರಿದೆ ಎಂದರು.
ಸಂಗೀತವು ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ತಂದುಕೊಡುವ ಮಹಾನ್ ಕಲೆ. ಒತ್ತಡ ನಿವಾರಿಸಿ ಆಧ್ಯಾತ್ಮಿಕ ಒಲವು ಮೂಡಿಸಿ ಜನರನ್ನು ಒಂದುಗೂಡಿಸುತ್ತದೆ. ಗಾಂಧೀಜಿಯವರು ಭಜನೆ ಮೂಲಕ ‘ಭಾರತೀಯರೆಲ್ಲ ಒಂದೇ, ಎಲ್ಲ ಧರ್ಮಗಳೂ ಒಂದೇ’ ಎಂಬ ಸಂದೇಶ ಸಾರಿದರು ಎಂದರು.
ಕಲಾಪೋಷಕ ಎಸ್.ರಾಮಪ್ರಸಾದ್ ಅವರಿಗೆ ಸಂಗೀತ ಸೇವಾನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾದನಮನ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜೆ.ಬೆಟಸೂರಮಠ ಪಾಲ್ಗೊಂಡಿದ್ದರು.