ಜಿಲ್ಲಾ ಇತಿಹಾಸ ವೇದಿಕೆ ವತಿಯಿಂದ ನಗರದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಇತಿಹಾಸ ಸಂಭ್ರಮ-3’ ಕಾರ್ಯಕ್ರಮ 
ಮೈಸೂರು

ಪ್ರತಿಯೊಬ್ಬ ವಿದ್ಯಾರ್ಥಿ ಚರಿತ್ರೆಯನ್ನು ಓದಿ ಅರ್ಥೈಸಿಕೊಳ್ಳಲಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಲಹೆ
  • ಇತಿಹಾಸ ಅಧ್ಯಯನದಿಂದ ಹೊಸ ಆಲೋಚನೆ ಸೃಷ್ಟಿ ಸಾಧ್ಯ.
  • ತಂತ್ರಜ್ಞಾನದಲ್ಲಿ ಮುಂದಿರುವ ಈಗಿನ ವಿದ್ಯಾರ್ಥಿಗಳು ಬುದ್ಧಿವಂತರು. ಆದರೆ, ಭಾವನಾತ್ಮಕ ಜ್ಞಾನ ಕಡಿಮೆ.
ಮೈಸೂರು: ಇತಿಹಾಸ ಅಧ್ಯಯನದಿಂದ ಹೊಸ ಆಲೋಚನೆ ಸೃಷ್ಟಿ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಚರಿತ್ರೆಯನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಜಿಲ್ಲಾ ಇತಿಹಾಸ ವೇದಿಕೆ ವತಿಯಿಂದ ನಗರದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ‘ಇತಿಹಾಸ ಸಂಭ್ರಮ-3’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಎಂದರೆ ಬರೀ ರಾಜರು, ಪಾಳೇಗಾರರಷ್ಟೇ ಅಲ್ಲ, ಅದು ಜನಸಾಮಾನ್ಯರ ಬದುಕಿನ ಚಿತ್ರಣ. ಅದು ಅಂದಿನ ಜನರ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಪಠ್ಯಕ್ರಮದೊಂದಿಗೆ ಇತಿಹಾಸವನ್ನೂ ಓದಿಕೊಳ್ಳಬೇಕು ಎಂದರು.
ಇತಿಹಾಸವೆಂದರೆ ಸಾಮಾನ್ಯವಲ್ಲ. ಅದು ನಂಬಿಕೆ. ಅದನ್ನು ಪ್ರಶ್ನಿಸುವ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯ ಇದೀಗ ಇಡೀ ಸಮಾಜಕ್ಕೆ ಬೆಳಕು ನೀಡುತ್ತಿದೆ. ಮೈಸೂರು ಪ್ರಾಂತ್ಯದ ಶೈಕ್ಷಣಿಕ ಅಭಿವೃದ್ಧಿಗೂ ಕಾರಣವಾಗಿದೆ. ಈ ವಿವಿ ಇರದಿದ್ದರೆ ಪರಿಸ್ಥಿತಿ ಹೇಗೆ ಇರುತ್ತಿತ್ತೋ ಊಹಿಸಲಾಗದು ಎಂದರು.
ತಂತ್ರಜ್ಞಾನದಲ್ಲಿ ಮುಂದಿರುವ ಈಗಿನ ವಿದ್ಯಾರ್ಥಿಗಳು ಬುದ್ಧಿವಂತರು. ಆದರೆ, ಭಾವನಾತ್ಮಕ ಜ್ಞಾನ ಕಡಿಮೆ. ಇದಕ್ಕೆ ಓದಿನ ಕೊರತೆಯೇ ಕಾರಣ ಎಂದರು.
ಶಿಕ್ಷಣ ವ್ಯಕ್ತಿಯನ್ನು ಬದಲು ಮಾಡಬೇಕು. ಇಲ್ಲವಾದರೆ ಶಿಕ್ಷಣ ಕಲಿಕೆಯೇ ವ್ಯರ್ಥ. ಜಂಕಫುಡ್ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂಬುದು ತಿಳಿದಿದ್ದರೂ, ಅದನ್ನು ತಿನ್ನುತ್ತಾರೆ. ಹೀಗಾದರೆ, ಶಿಕ್ಷಣ ಕಲಿತು ಏನು ಪ್ರಯೋಜನ? ಶಿಕ್ಷಣ ಪಡೆದವರು ಸ್ವಯಂ ಬದಲಾಗಬೇಕು. ಅವರಿಂದ ಕುಟುಂಬ, ಊರು, ಕೊನೆಯಲ್ಲಿ ಸಮಾಜವೇ ಬದಲಾಗುತ್ತದೆ ಎಂದರು.
ಈಗ ಜ್ಞಾನವೊಂದಿದ್ದರೆ ಸಾಕಾಗದು. ಅದರೊಂದಿಗೆ ಕೌಶಲ ಮತ್ತು ಮೌಲ್ಯವೂ ಬೇಕು. ಅಂಕ ಮುಖ್ಯವಲ್ಲ. ಮನಸ್ಥಿತಿ ಮುಖ್ಯ. ಸೃಜನಶೀಲತೆ, ಕ್ರಿಯಾಶೀಲತೆ ಇರಬೇಕು. ಕಾಲಕ್ಕೆ ತಕ್ಕಂತೆ ಜ್ಞಾನವನ್ನೂ ಉನ್ನತೀಕರಣಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದಿಂದ ಕೆಲಸ ಹೋಗಲ್ಲ. ಅದು ಹೊಸ ಅವಕಾಶವನ್ನು ಸೃಷ್ಟಿಸುತ್ತದೆ. ಇಂತಹ ತಂತ್ರಜ್ಞಾನ ಬಳಕೆಗೆ ಸಜ್ಜಾಗಬೇಕಿದೆ ಎಂದೂ ಹೇಳಿದರು.
2026ರಲ್ಲಿ ಇತಿಹಾಸ ವಿಷಯದಲ್ಲಿ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. 
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ.ನಾಗಮ್ಮ, ವೇದಿಕೆಯ ಗೌರವಾಧ್ಯಕ್ಷ ಎಂ.ಸಿ.ಚಂದ್ರಶೇಖರ್, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎ.ರಾಮೇಗೌಡ, ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ.ಮಹದೇವ್ ಇನ್ನಿತರರಿದ್ದರು.