ರೋಟರಿ ಪಿರಿಯಾಪಟ್ಟಣ ಐಕಾನ್ಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಿ.ಕೆ.ರಾಮಕೃಷ್ಣ, ರಾಜೇಗೌಡ, ಕೆ.ರಮೇಶ್, ಎಂ.ಬಿ.ಸಂಪತ್, ಬಿ.ಎಸ್.ಸತೀಶ್ ಆರಾಧ್ಯ, ಟಿ.ಎಸ್.ಹರೀಶ್ ಇದ್ದರು.
ಪಿರಿಯಾಪಟ್ಟಣ: ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ರೋಟರಿ ಸಂಸ್ಥೆ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮನ್ನಣೆ ಪಡೆದಿದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಪ್ರಾಂತಪಾಲ ಪಿ.ಕೆ.ರಾಮಕೃಷ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದರು. ಪರಿಸರ, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಸಮಾಜದಲ್ಲಿ ಸೇವಾ ಚಟುವಟಿಕೆಗಳನ್ನು ಮಾಡುವ ಆಸಕ್ತರನ್ನು ರೋಟರಿ ಕುಟುಂಬಕ್ಕೆ ಸೇರ್ಪಡೆಗೊಳಿಸಿ. ಅಗತ್ಯವಿರುವೆಡೆಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ನಮ್ಮ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಅಗತ್ಯವಿದೆ. ಎಲ್ಲರೂ ಇತರರಿಗೆ ಮಾದರಿಯಾಗಿರಬೇಕು. ಯಾವುದೇ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಅದರ ಫಲಶ್ರುತಿ ಏನು ಎಂಬ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕಿದೆ ಎಂದರು.
ಬಹುತೇಕ ನಗರ ಪ್ರದೇಶಗಳಲ್ಲಿ ರೋಟರಿಯ ಸೇವಾ ಚಟುವಟಿಕೆಗಳಿಗೆ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಉಪಯೋಗವಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೂ ಸಿಎಸ್‌ಆರ್ ನಿಧಿ ತಲುಪುವಂತೆ ಮಾಡುವುದು ರೋಟರಿಯ ಕರ್ತವ್ಯವಾಗಬೇಕಿದೆ. ಹೊಸ ಹೊಸ ಸದಸ್ಯರನ್ನು ಸಂಸ್ಥೆಗೆ ಸೇರ್ಪಡೆಗೊಳಿಸಿ ಸದಸ್ಯತ್ವವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಪ್ರತಿಯೊಬ್ಬ ಹೊಂದಬೇಕಿದೆ ಎಂದರು.
ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ರಾಜೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳ ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕಿದೆ ಎಂದರು.
ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ಗೆ ಐವರು ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ರೋಟರಿ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ವಲಯ ಲೆಫ್ಟಿನೆಂಟ್ ಕೆ.ರಮೇಶ್, ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್, ಕಾರ್ಯದರ್ಶಿ ಬಿ.ಎಸ್.ಸತೀಶ್ ಆರಾಧ್ಯ, ನಿಯೋಜಿತ ಅಧ್ಯಕ್ಷ ಟಿ.ಎಸ್.ಹರೀಶ್, ನಿಯೋಜಿತ ಕಾರ್ಯದರ್ಶಿ ಕೆ.ಡಿ. ಸಂದೀಪ್, ಪದಾಧಿಕಾರಿಗಳಾದ ಜೆ.ಎಸ್.ನಾಗರಾಜ್, ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಬಿ.ಎಸ್.ಪ್ರಸನ್ನ ಕುಮಾರ್, ಎಸ್.ರಮೇಶ್, ಡಿ.ಆರ್.ಧನಂಜಯ್, ಬಿ.ವಿ.ಅನಿತಾ, ಪ್ರೀತಿ ಅರಸ್, ಎಚ್.ಆರ್.ರಮ್ಯಾ, ಕೆ.ವಿ.ಶಿಲ್ಪಾ, ನಾಗ ನಾಯಕ, ವಿ.ಎಸ್.ರಮೇಶ್, ಪರಮೇಶ್, ಡಿ.ರಮೇಶ್, ನಾಗರಾಜ್, ಕುಮಾರ್, ಆನಂದ್, ಕಾಳೇಗೌಡ, ಶ್ರೀನಿವಾಸ್ ಇದ್ದರು.