ನಗರದ ಮಾನಸ ಗಂಗೋತ್ರಿಯ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಂಜಾನ್ ದರ್ಗಾ, ಪ್ರೊ.ಎಸ್.ಜೆ. ಮಂಜುನಾಥ್, ಡಿ.ಆನಂದ್, ಪ್ರೊ. ಆರ್. ಮಹೇಶ್ ಇದ್ದರು. 
ಮೈಸೂರು

ವರ್ಗ ತಾರತಮ್ಯಗಳು ತೊಲಗಲಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಚಿಂತಕ ರಂಜಾನ್ ದರ್ಗಾ ಆಶಯ
  • ಸಮತಾ ಉತ್ಸವ
ಸಮಾಜದಲ್ಲಿ ಸಮಾನತೆ ಮತ್ತು ಪ್ರಜ್ಞೆಯ ಬೆಳಕು ಹರಡಲು ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ನಡೆಸಿದ ಹೋರಾಟಗಳು ಕೇವಲ ಒಂದು ಕಾಲಘಟ್ಟಕ್ಕೆ ಸೀಮಿತವಲ್ಲ ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.
ನಗರದ ಮಾನಸ ಗಂಗೋತ್ರಿಯ ರಾಣಿಬಹುದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮತಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ಸಾವಿರ ವರ್ಷಗಳ ಸಾಮಾಜಿಕ ಶೋಷಣೆ, ಅಸಮಾನತೆ ಮತ್ತು ಹೋರಾಟದ ಇತಿಹಾಸವನ್ನು ಅರಿತಾಗ ಮಾತ್ರ ಅಂಬೇಡ್ಕರ್ ಮಹತ್ವ ಅರ್ಥವಾಗುತ್ತದೆ ಎಂದರು.
ಜಾತಿ, ಲಿಂಗ, ಧರ್ಮ ಹಾಗೂ ವರ್ಗ ತಾರತಮ್ಯಗಳು ಸಮಾಜದಿಂದ ಸಂಪೂರ್ಣವಾಗಿ ತೊಲಗುವವರೆಗೂ ನಾವು ನಿಜವಾದ ಅರ್ಥದಲ್ಲಿ ಮನುಷ್ಯರಾಗುವುದಿಲ್ಲ. ಭಾರತದ ಇತಿಹಾಸವು ಕೇವಲ ರಾಜರು ಮತ್ತು ಯುದ್ಧಗಳ ಇತಿಹಾಸವಲ್ಲ. ಅದು ಸಮಾನತೆಗಾಗಿ ನಡೆದ ದೀರ್ಘ ಹೋರಾಟಗಳ ಇತಿಹಾಸವಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿಯೂ ಇಷ್ಟೊಂದು ದೀರ್ಘಕಾಲದ ಸಾಮಾಜಿಕ ಹೋರಾಟ ನಡೆದಿಲ್ಲ ಎಂದರು.
ಮನುವಾದಿ ವ್ಯವಸ್ಥೆ ಮನುಷ್ಯರನ್ನು ಜಾತಿ, ವರ್ಣ ಮತ್ತು ಕರ್ಮ ಸಿದ್ಧಾಂತಗಳ ಹೆಸರಿನಲ್ಲಿ ವಿಭಜಿಸಿ ಶೋಷಿಸಿತು. ಈ ಅನ್ಯಾಯದ ವಿರುದ್ಧ ಚಿಕಿತ್ಸೆ ನೀಡಿದವರು ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್. ಇಂದು ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಕಲ್ಪನೆ ಬುದ್ಧನ ಚಿಂತನೆಗಳಿಂದ ಆರಂಭವಾಗಿದೆ ಎಂದು ಹೇಳಿದರು.
ಪ್ರಾಧ್ಯಾಪಕ ಪ್ರೊ.ಎಸ್.ಜೆ. ಮಂಜುನಾಥ್, ನಿವೃತ್ತ ಪ್ರಾಧ್ಯಾಪಕ ಡಿ.ಆನಂದ್, ಬಿಮ್ಸ್ ಅಧ್ಯಕ್ಷ ಪ್ರೊ. ಆರ್. ಮಹೇಶ್ ಇದ್ದರು.