ಪಿರಿಯಾಪಟ್ಟಣದ ಚೈತನ್ಯ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಗಿರೀಶ್ ಉದ್ಘಾಟಿಸಿದರು. ಕೆ.ಎ.ಮಹದೇವಪ್ಪ, ಕೆಂಪಣ್ಣ, ಸಿಸ್ಟರ್ ರೋಸಿ, ಸಿಸ್ಟರ್ ಜಿಷಾ ಇದ್ದರು. 
ಮೈಸೂರು

ನಿರ್ದಿಷ್ಟ ಗುರಿಯೊಂದಿಗೆ ಮಕ್ಕಳು ಅಭ್ಯಾಸ ಮಾಡಲಿ

ಪಿರಿಯಾಪಟ್ಟಣ: ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿದಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ನಂಬಿದ್ದರು ಎಂದು ಪಿರಿಯಾಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಗಿರೀಶ್ ತಿಳಿಸಿದರು.
ಪಟ್ಟಣದ ಚೈತನ್ಯ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಪಾಲಕರ ಕನಸನ್ನು ಈಡೇರಿಸುವ ಜತೆಗೆ ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಶಿಕ್ಷಣಕ್ಕೆ ತನ್ನದೇ ಆದ ಮಹತ್ವವಿದ್ದು ಉತ್ತಮ ವಿದ್ಯಾಭ್ಯಾಸದಿಂದ ಉದ್ಯೋಗಾವಕಾಶ ಸಾಕಷ್ಟಿವೆ. ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರಾವುದೂ ಇಲ್ಲ. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿದ ಹಲವು ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕೆ.ಎ.ಮಹದೇವಪ್ಪ ಮಾತನಾಡಿ ಲಯನ್ಸ್ ಸಂಸ್ಥೆಯು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ಹಗಲಿರಲು ಶ್ರಮಿಸುತ್ತಿದೆ ಎಂದರು.
ಪಟ್ಟಣದ ನ್ಯಾಯಾಲಯದ ಸಿಬ್ಬಂದಿ ಕೆಂಪಣ್ಣ, ವಕೀಲ ಬಿ.ಆರ್.ಗಣೇಶ್, ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಸಿಸ್ಟರ್ ರೋಸಿ, ಸಿಸ್ಟರ್ ಜಿಷಾ ಮಾತನಾಡಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಲಯನ್ಸ್ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಆನಂದ್, ಮಾಜಿ ಅಧ್ಯಕ್ಷ ಪಿ.ಕೆ.ಕುಮಾರ್, ಸದಸ್ಯ ಸ್ವಾಮಿ ಹಾಜರಿದ್ದರು.